RCB ರಿಟೆನ್ಷನ್ ಕುರಿತು ಮೌನ ಮುರಿದ ಗ್ಲೆನ್ ಮ್ಯಾಕ್ಸ್ ವೆಲ್
ಆಡಳಿತ ಮಂಡಳಿಯೊಂದಿಗಿನ ಮಾತುಕತೆಯನ್ನು ಬಹಿರಂಗಗೊಳಿಸಿದ ಆಸ್ಟ್ರೇಲಿಯಾ ಆಲ್ ರೌಂಡರ್
ಗ್ಲೆನ್ ಮ್ಯಾಕ್ಸ್ ವೆಲ್ | PC: PTI
ಹೊಸದಿಲ್ಲಿ: 2025ರ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಕೇವಲ ಮೂವರು ಆಟಗಾರರನ್ನು ಉಳಿಸಿಕೊಳ್ಳಲು ಆರ್ಸಿಬಿ (RCB) ಫ್ರಾಂಚೈಸಿ ನಿರ್ಧರಿಸಿದ್ದು, ಆಸ್ಟ್ರೇಲಿಯಾ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ರನ್ನು ತನ್ನ ರಿಟೆನ್ಷನ್ ಪಟ್ಟಿಯಿಂದ ಕೈಬಿಟ್ಟಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಗ್ಲೆನ್ ಮ್ಯಾಕ್ಸ್ ವೆಲ್, RCB ತಂಡದಿಂದ ಬೇರ್ಪಡುತ್ತಿರುವುದು ಸುಂದರ ಕ್ಷಣವಾಗಿದೆ ಎಂದು ಬಣ್ಣಿಸಿದ್ದಾರೆ.
ನವೆಂಬರ್ 24-25ರಂದು ಜಿದ್ದಾದಲ್ಲಿ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು, ವಿರಾಟ್ ಕೊಹ್ಲಿ, ಯಶ್ ದಯಾಳ್ ಹಾಗೂ ರಜತ್ ಪಾಟೀದಾರ್ ರನ್ನು ತಂಡದಲ್ಲಿ ಉಳಿಸಿಕೊಳ್ಳುವ ನಿರ್ಧಾರಕ್ಕೆ RCB ಬಂದಿದೆ. ತನ್ನ ತಂಡವನ್ನು ಪುನರ್ ರೂಪಿಸಿಕೊಳ್ಳಲು ಮುಂದಾಗಿರುವ RCB, ಗ್ಲೆನ್ ಮ್ಯಾಕ್ಸ್ ವೆಲ್ ಸೇರಿದಂತೆ ಇನ್ನಿತರ ಆಟಗಾರರನ್ನು ತಂಡದಿಂದ ಕೈಬಿಟ್ಟಿದೆ.
Glenn Maxwell spoke highly of RCB and its management. Mo Bobat and Andy Flower communicated their decision not to retain him ahead of the IPL mega auction over a phone call, and that's how legends should be treated.
— RCBIANS OFFICIAL (@RcbianOfficial) November 6, 2024
Class act #RCB #IPLAuction pic.twitter.com/pqhzIQ8Z5n
2021ರಲ್ಲಿ RCB ತಂಡವನ್ನು ಪ್ರವೇಶಿಸಿದ್ದ ಗ್ಲೆನ್ ಮ್ಯಾಕ್ಸ್ ವೆಲ್, ಕಳೆದ ನಾಲ್ಕು ಋತುಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಈ ನಾಲ್ಕು ಋತುಗಳಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ 52 ಪಂದ್ಯಗಳಿಂದ 1,266 ರನ್ ಕಲೆ ಹಾಕಿದ್ದರು. ಮೂರು ಬಾರಿ RCB ತಂಡವು ಪ್ಲೇ ಆಫ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಕುರಿತು ESPNcricinfo's Around the Wicket ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿರುವ ಗ್ಲೆನ್ ಮ್ಯಾಕ್ಸ್ ವೆಲ್, ತನ್ನನ್ನು ತಂಡದಿಂದ ಕೈಬಿಡುವ ನಿರ್ಧಾರವನ್ನು ನಿರ್ವಹಿಸಿದ ರೀತಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ.
RCB ತಂಡದ ವೃತ್ತಿಪರತೆ ಹಾಗೂ ಪಾರದರ್ಶಕತೆಯನ್ನು ಶ್ಲಾಘಿಸಿರುವ ಗ್ಲೆನ್ ಮ್ಯಾಕ್ಸ್ ವೆಲ್, ತಮ್ಮ ನಿರ್ಗಮನ ಪ್ರಕ್ರಿಯೆಯನ್ನು ಸುಗಮವಾಗಿ ನಿರ್ವಹಿಸಿದ ರೀತಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಎಲ್ಲ ತಂಡಗಳೂ ಇದೇ ರೀತಿ ಮಾಡಿದರೆ, ಸಂಬಂಧಗಳನ್ನು ಮತ್ತಷ್ಟು ನವಿರಾಗಿಸಿಕೊಳ್ಳಬಹುದು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.