ಮುಂಬೈ ಇಂಡಿಯನ್ಸ್ ಗೆ ಶುಭ ಸುದ್ದಿ | ನೆಟ್ ನಲ್ಲಿ ಬ್ಯಾಟಿಂಗ್ ಮಾಡಿದ ಸೂರ್ಯಕುಮಾರ್ ಯಾದವ್
Photo: twitter \ @surya_14kumar
ಮುಂಬೈ: ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಗೆ ಖುಷಿಪಡುವ ಸುದ್ದಿಯೊಂದು ಬಂದಿದೆ. ಮುಂಬೈನ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಗುರುವಾರ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಶುಕ್ರವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಸುಮಾರು ಎರಡು ಗಂಟೆಗಳ ಕಾಲ ನೆಟ್ ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.
ಉಳಿದ ಆಟಗಾರರಿಗಿಂತ ಬೇಗನೆ ಆಗಮಿಸಿದ ಸೂರ್ಯ ಕುಮಾರ್ ಥ್ರೋಡೌನ್ಸ್ ಹಾಗೂ ಮುಂಬೈನ ಎಡಗೈ ಸ್ಪಿನ್ನರ್ ಕುಮಾರ್ ಕಾರ್ತಿಕೇಯ ವಿರುದ್ಧ ತನ್ನ ಹೊಡೆತಗಳ ಅಭ್ಯಾಸ ನಡೆಸಿದರು. ರವಿವಾರ ಮಧ್ಯಾಹ್ನ ವಾಂಖೆಡೆ ಸ್ಟೇಡಿಯಮ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯುವ ಮುಂದಿನ ಐಪಿಎಲ್ ಪಂದ್ಯಕ್ಕೆ ಸೂರ್ಯ ಲಭ್ಯವಿರಲಿದ್ದಾರೆ. ಈ ಮೂಲಕ ಮೂರು ತಿಂಗಳ ನಂತರ ಸ್ಪರ್ಧಾತ್ಮಕ ಕ್ರಿಕೆಟಿಗೆ ವಾಪಸಾಗಲಿದ್ದಾರೆ.
ಈ ವರ್ಷಾರಂಭದಿಂದ ಕ್ರಿಕೆಟ್ನಿಂದ ದೂರ ಉಳಿಯಲು ಕಾರಣವಾಗಿರುವ ಮೊಣಕಾಲು ಹಾಗೂ ಹರ್ನಿಯಾ ಶಸ್ತ್ರ ಚಿಕಿತ್ಸೆಗಳಿಂದ ಸೂರ್ಯಕುಮಾರ್ ಚೇತರಿಸಿಕೊಂಡಿದ್ದಾರೆ. ಸೂರ್ಯ ಇತ್ತೀಚೆಗೆ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯಿಂದ ಫಿಟ್ನೆಸ್ ಪ್ರಮಾಣಪತ್ರ ಪಡೆದಿದ್ದಾರೆ. ಯಾದವ್ ಸೇವೆಯಿಂದ ವಂಚಿತವಾಗಿರುವ ಮುಂಬೈ ತಂಡ ಸತತ ಮೂರು ಐಪಿಎಲ್ ಪಂದ್ಯಗಳನ್ನು ಸೋತಿದೆ.
ಮುಂಬೈನ ಹೊಡಿಬಡಿ ಬ್ಯಾಟರ್ ಪುನರಾಗಮನವು ಟೀಮ್ ಇಂಡಿಯಾಕ್ಕೆ ಕೂಡ ಶುಭ ಸುದ್ದಿಯಾಗಿದೆ. ಜೂನ್ ನಲ್ಲಿ ಅಮೆರಿಕ ಹಾಗೂ ವೆಸ್ಟ್ಇಂಡೀಸ್ ಆಶ್ರಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೂರ್ಯಕುಮಾರ್ ಮಹತ್ವದ ಪಾತ್ರವಹಿಸುವ ಸಾಧ್ಯತೆಯಿದೆ.
ಸೂರ್ಯಕುಮಾರ್ ಡಿಸೆಂಬರ್ನಲ್ಲಿ ಕೊನೆಯ ಬಾರಿ ಸ್ಪರ್ಧಾತ್ಮಕ ಪಂದ್ಯವನ್ನು ಆಡಿದ್ದರು. ಆಗ ಜೋಹಾನ್ಸ್ಬರ್ಗ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ 56 ಎಸೆತಗಳಲ್ಲಿ 100 ರನ್ ಗಳಿಸಿದ್ದರು. ಆ ಪಂದ್ಯದಲ್ಲಿ ಅವರಿಗೆ ಮೊಣಕಾಲು ನೋವು ಕಾಣಿಸಿಕೊಂಡಿತ್ತು. ಆ ನಂತರ ಸ್ಪೋರ್ಟ್ಸ್ ಹರ್ನಿಯಾ ಅವರನ್ನು ಬಾಧಿಸಿತ್ತು. ಜನವರಿ 17ರಂದು ಜರ್ಮನಿಯ ಮ್ಯೂನಿಚ್ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
33ರ ಹರೆಯದ ಬ್ಯಾಟರ್ ಸೂರ್ಯಕುಮಾರ್ ಭಾರತದ ಪರ 60 ಟಿ-20 ಪಂದ್ಯಗಳಲ್ಲಿ 171.55ರ ಸ್ಟ್ರೈಕ್ರೇಟ್ ನಲ್ಲಿ ನಾಲ್ಕು ಶತಕಗಳ ಸಹಿತ 2,141 ರನ್ ಗಳಿಸಿದ್ದಾರೆ.