ವಿಲ್ ಜಾಕ್ಸ್ ಶತಕ, ಕೊಹ್ಲಿ ಅರ್ಧಶತಕ | ಆರ್ಸಿಬಿ ವಿರುದ್ಧ ಪಲ್ಟಿ ಹೊಡೆದ ಗುಜರಾತ್ ಟೈಟಾನ್ಸ್
Photo : x/@RCBTweets
ಅಹ್ಮದಾಬಾದ್ : ವಿಲ್ ಜಾಕ್ಸ್(ಔಟಾಗದೆ 100, 41 ಎಸೆತ, 5 ಬೌಂಡರಿ, 10 ಸಿಕ್ಸರ್) ಹಾಗೂ ವಿರಾಟ್ ಕೊಹ್ಲಿ(ಔಟಾಗದೆ 70, 44 ಎಸೆತ, 6 ಬೌಂಡರಿ, 3 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆತಿಥೇಯ ಗುಜರಾತ್ ಟೈಟಾನ್ಸ್ ತಂಡವನ್ನು 9 ವಿಕೆಟ್ಗಳ ಅಂತರದಿಂದ ಮಣಿಸಿದೆ. ಈ ಮೂಲಕ ಟೂರ್ನಿಯಲ್ಲಿ ತಾನಾಡಿದ 10ನೇ ಪಂದ್ಯದಲ್ಲಿ 3ನೇ ಗೆಲುವು ದಾಖಲಿಸಿದೆ.
ಐಪಿಎಲ್ನ 45ನೇ ಪಂದ್ಯದಲ್ಲಿ ಗೆಲ್ಲಲು 201 ರನ್ ಗುರಿ ಬೆನ್ನಟ್ಟಿದ ಆರ್ಸಿಬಿ 16 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ರಶೀದ್ ಖಾನ್ ಎಸೆದ 16ನೇ ಓವರ್ನಲ್ಲಿ 4 ಸಿಕ್ಸರ್ ಹಾಗೂ 1 ಬೌಂಡರಿ ಸಹಿತ 29 ರನ್ ಗಳಿಸಿದ ವಿಲ್ ಜಾಕ್ಸ್ ಶತಕ ಪೂರೈಸಿ ಸುಲಭ ಗೆಲುವು ತಂದುಕೊಟ್ಟರು.
ಆರಂಭಿಕ ಬ್ಯಾಟರ್ಗಳಾದ ಕೊಹ್ಲಿ ಹಾಗೂ ಎಫ್ ಡು ಪ್ಲೆಸಿಸ್ 3.5 ಓವರ್ಗಳಲ್ಲಿ 40 ರನ್ ಗಳಿಸಿ ಬಿರುಸಿನ ಆರಂಭ ನೀಡಿದರು. ಪ್ಲೆಸಿಸ್ ವಿಕೆಟನ್ನು ಉರುಳಿಸಿದ ಸಾಯಿ ಕಿಶೋರ್ ಆರ್ಸಿಬಿಗೆ ಆರಂಭಿಕ ಆಘಾತ ನೀಡಿದರು.
ಈ ವೇಳೆ ಜೊತೆಯಾದ ಕೊಹ್ಲಿ ಹಾಗೂ ಜಾಕ್ಸ್ 2ನೇವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 74 ಎಸೆತಗಳಲ್ಲಿ 166 ರನ್ ಸೇರಿಸಿ ಇನ್ನೂ 24 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ತಂದುಕೊಟ್ಟರು.
ಜಾಕ್ಸ್ ಕೇವಲ 41 ಎಸೆತಗಳಲ್ಲಿ 10 ಸಿಕ್ಸರ್ ಹಾಗೂ 5 ಬೌಂಡರಿಗಳ ಸಹಾಯದಿಂದ ಶತಕ ಪೂರೈಸಿ ಆರ್ಸಿಬಿಯ ಗೆಲುವಿನ ಹಾದಿ ಸುಲಭಗೊಳಿಸಿದರು. ಹಿರಿಯ ಬ್ಯಾಟರ್ ಕೊಹ್ಲಿ 32 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅರ್ಧಶತಕ ಪೂರೈಸಿದರು.
*ಸುದರ್ಶನ್, ಶಾರೂಕ್ ಖಾನ್ ಅರ್ಧಶತಕ, ಗುಜರಾತ್ ಟೈಟಾನ್ಸ್ 200/3
ಟಾಸ್ ಸೋತು ಆರ್ಸಿಬಿಯಿಂದ ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಗುಜರಾತ್ ಟೈಟಾನ್ಸ್ ತಂಡ ಅಗ್ರ ಸರದಿಯ ಬ್ಯಾಟರ್ಗಳಾದ ಸಾಯಿ ಸುದರ್ಶನ್(ಔಟಾಗದೆ 84, 49 ಎಸೆತ)ಹಾಗೂ ಶಾರೂಕ್ ಖಾನ್(58 ರನ್, 30 ಎಸೆತ) ಅರ್ಧಶತಕದ ಸಹಾಯದಿಂದ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ಗಳ ನಷ್ಟಕ್ಕೆ ಬರೋಬ್ಬರಿ 200 ರನ್ ಗಳಿಸಿತು.
ಇನಿಂಗ್ಸ್ ಆರಂಭಿಸಿದ ವೃದ್ದಿಮಾನ್ ಸಹಾ(5 ರನ್) ಹಾಗೂ ಶುಭಮನ್ ಗಿಲ್(16 ರನ್)ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾದರು. ಈ ಇಬ್ಬರು ಆಟಗಾರರು ಬೇಗನೆ ಔಟಾದರು. ಸಹಾ ಮೊದಲ ಓವರ್ನಲ್ಲಿಯೇ ವಿಕೆಟ್ ಕೈಚೆಲ್ಲಿದರು. ಸ್ವಪ್ನಿಲ್ ಸಿಂಗ್ ಅವರು ಮೊದಲ ಓವರ್ನ ಕೊನೆಯ ಎಸೆತದಲ್ಲಿ ಸಹಾಗೆ ಪೆವಿಲಿಯನ್ ಹಾದಿ ತೋರಿಸಿದರು.
ನಾಯಕ ಗಿಲ್ ಅಲ್ಪ ಮೊತ್ತಕ್ಕೆ ಮ್ಯಾಕ್ಸ್ವೆಲ್ಗೆ ವಿಕೆಟ್ ಒಪ್ಪಿಸಿದರು. ಆಗ ಗುಜರಾತ್ 45 ರನ್ಗೆ 2 ವಿಕೆಟ್ ಕಳೆದುಕೊಂಡಿತು. ಸಾಯಿ ಸುದರ್ಶನ್ ಹಾಗೂ ಶಾರೂಕ್ ಖಾನ್ 3ನೇ ವಿಕೆಟ್ಗೆ 86 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.
4ನೇ ಕ್ರಮಾಂಕದಲ್ಲಿ ಭಡ್ತಿ ಪಡೆದು ಬಂದ ಶಾರೂಕ್ ಖಾನ್ 30 ಎಸೆತಗಳಲ್ಲಿ 3 ಬೌಂಡರಿ ಹಾಗೂ 5 ಸಿಕ್ಸರ್ ಒಳಗೊಂಡ 58 ರನ್ ಗಳಿಸಿ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಬೌಲಿಂಗ್ನಲ್ಲಿ ಕ್ಲೀನ್ಬೌಲ್ಡಾದರು.
ಶಾರೂಕ್ ಖಾನ್ ಔಟಾದ ನಂತರ ಡೇವಿಡ್ ಮಿಲ್ಲರ್(ಔಟಾಗದೆ 26, 19 ಎಸೆತ) ಜೊತೆಗೂಡಿದ ಸುದರ್ಶನ್ 4ನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 36 ಎಸೆತಗಳಲ್ಲಿ 69 ರನ್ ಸೇರಿಸಿ ತಂಡದ ಮೊತ್ತವನ್ನು 200ಕ್ಕೆ ತಲುಪಿಸಿದರು.
ಸಾಯಿ ಸುದರ್ಶನ್ ಮತ್ತೊಮ್ಮೆ ತನ್ನ ಸಾಮರ್ಥ್ಯ ತೋರ್ಪಡಿಸಿದ್ದು ಕೇವಲ 49 ಎಸೆತಗಳಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್ಗಳ ಸಹಿತ ಔಟಾಗದೆ 84 ರನ್ ಗಳಿಸಿದರು. ಮಿಲ್ಲರ್ ಕೇವಲ 19 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ ಔಟಾಗದೆ 26 ರನ್ ಗಳಿಸಿದರು.
ಬೆಂಗಳೂರು ಆರಂಭದಲ್ಲಿ ಉತ್ತಮ ಬೌಲಿಂಗ್ ಮಾಡಿದ್ದು, ಮಧ್ಯಮ ಓವರ್ನಲ್ಲಿ ತನ್ನ ಲಯ ಕಳೆದುಕೊಂಡಿತು. ಮುಹಮ್ಮದ್ ಸಿರಾಜ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ತಲಾ ಒಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಗುಜರಾತ್ ಟೈಟಾನ್ಸ್: 20 ಓವರ್ಗಳಲ್ಲಿ 200/3
(ಸಾಯಿ ಸುದರ್ಶನ್ ಔಟಾಗದೆ 84, ಶಾರೂಕ್ ಖಾನ್ 58, ಡೇವಿಡ್ ಮಿಲ್ಲರ್ ಔಟಾಗದೆ 26, ಸ್ವಪ್ನಿಲ್ ಸಿಂಗ್ 1-23, ಮ್ಯಾಕ್ಸ್ವೆಲ್ 1-28, ಮುಹಮ್ಮದ್ ಸಿರಾಜ್ 1-34)
ರಾಯಲ್ ಚಾಲೆಂಜರ್ಸ್ ಬೆಂಗಳೂರು: 16 ಓವರ್ಗಳಲ್ಲಿ 206/1
(ವಿಲ್ ಜಾಕ್ಸ್ ಔಟಾಗದೆ 100, ವಿರಾಟ್ ಕೊಹ್ಲಿ ಔಟಾಗದೆ 70, ಪ್ಲೆಸಿಸ್ 24, ಸಾಯಿ ಕಿಶೋರ್ 1-30)