ಸೈಯದ್ ಮುಷ್ತಾಕ್ ಅಲಿ ಟ್ರೋಫಿ | ಕೇವಲ 28 ಬಾಲ್ ಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದ ಊರ್ವಿಲ್ ಪಟೇಲ್!
ಊರ್ವಿಲ್ ಪಟೇಲ್ (Photo: PTI)
ಇಂದೋರ್: ಬುಧವಾರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಗುಜರಾತ್-ತ್ರಿಪುರಾ ತಂಡಗಳ ನಡುವೆ ನಡೆದ ಟಿ-20 ಪಂದ್ಯದಲ್ಲಿ ಗುಜರಾತ್ ನ ವಿಕೆಟ್ ಕೀಪರ್ ಬ್ಯಾಟರ್ ಊರ್ವಿಲ್ ಪಟೇಲ್ ಕೇವಲ 28 ಬಾಲ್ ಗಳಲ್ಲಿ ಶತಕ ಸಿಡಿಸಿದ್ದಾರೆ.
ಇದಕ್ಕೂ ಮುನ್ನ, 2018ರಲ್ಲಿ ಸೈಯದ್ ಮುಷ್ತಾಕ್ ಟ್ರೋಫಿಯಲ್ಲಿ ಹಿಮಾಚಲ ಪ್ರದೇಶ ತಂಡದ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಕೇವಲ 32 ಬಾಲ್ ಗಳಲ್ಲಿ ಶತಕ ಸಿಡಿಸಿದ್ದ ರಿಷಭ್ ಪಂತ್, ಟಿ-20 ಕ್ರಿಕೆಟ್ ನಲ್ಲಿ ಅತಿ ವೇಗದ ಶತಕ ಬಾರಿಸಿದ ಭಾರತೀಯ ಆಟಗಾರ ಎಂಬ ಶ್ರೇಯಕ್ಕೆ ಭಾಜನರಾಗಿದ್ದರು. ಆ ಸಾಧನೆಯನ್ನು ಮತ್ತಷ್ಟು ಉತ್ತಮ ಪಡಿಸಿದ ಊರ್ವಿಲ್ ಪಟೇಲ್, ಕೇವಲ 28 ಬಾಲ್ ಗಳಲ್ಲಿ ಶತಕದ ಗಡಿ ದಾಟಿದರು.
ಟಿ-20 ಕ್ರಿಕೆಟ್ ನಲ್ಲಿ ಅತಿ ವೇಗದ ಶತಕ ಗಳಿಸಿದ ಎರಡನೆ ಆಟಗಾರ ಊರ್ವಿಲ್ ಪಟೇಲ್ ಆಗಿದ್ದು, ಸಿಪ್ರಸ್ ತಂಡದ ವಿರುದ್ಧ ಕೇವಲ 27 ಬಾಲ್ ಗಳಲ್ಲಿ ಶತಕ ಸಿಡಿಸಿದ್ದ ಎಸ್ಟೋನಿಯ ತಂಡದ ಸಾಹಿಲ್ ಚೌಹಾಣ್ ಅಗ್ರಸ್ಥಾನದಲ್ಲಿದ್ದಾರೆ.
ಗುಜರಾತ್ ತಂಡದ ಪರ ಬ್ಯಾಟಿಂಗ್ ಆರಂಭಿಸಿದ ಊರ್ವಿಲ್ ಪಟೇಲ್ 7 ಬೌಂಡರಿ ಹಾಗೂ 12 ಸಿಕ್ಸರ್ ಗಳ ನೆರವಿನಿಂದ ಕೇವಲ 35 ಬಾಲ್ ಗಳಲ್ಲಿ ಅಜೇಯ 113 ರನ್ ಗಳಿಸಿದರು. ಅವರ ಬಿರುಸಿನ ಶತಕದ ನೆರವಿನಿಂದ ಗುಜರಾತ್ ತಂಡವು ಕೇವಲ 10.2 ಓವರ್ ಗಳಲ್ಲಿ ಗೆಲುವಿನ 156 ರನ್ ಗಳ ಗುರಿಯನ್ನು ದಾಟಿತು.
ಆದರೆ, ಈ ವಾರದ ಆರಂಭದಲ್ಲಿ ನಡೆದಿದ್ದ ಐಪಿಎಲ್ ಹರಾಜಿನಲ್ಲಿ ಊರ್ವಿಲ್ ಪಟೇಲ್ ಅನ್ನು ಯಾವ ತಂಡವೂ ಖರೀದಿಸಿರಲಿಲ್ಲ.
ಗುಜರಾತ್ ಟೈಟನ್ಸ್ ತಂಡದಿಂದ ಬಿಡಗಡೆಗೊಂಡ ನಂತರ, ಸರಿಯಾಗಿ ಒಂದು ವರ್ಷದ ಹಿಂದೆ ಚಂಡೀಗಢದಲ್ಲಿ ಅರುಣಾಚಲ ಪ್ರದೇಶ-ಗುಜರಾತ್ ತಂಡಗಳ ನಡುವೆ ನಡೆದಿದ್ದ ವಿಜಯ್ ಹಝಾರೆ ಟ್ರೋಫಿ ಪಂದ್ಯದಲ್ಲಿ ಊರ್ವಿಲ್ ಪಟೇಲ್ ಕೇವಲ 41 ಬಾಲ್ ಗಳಲ್ಲಿ ಶತಕ ಸಿಡಿಸಿದ್ದರು.