ಅಮ್ಮನಿಗೆ ವಿಶ್ವ ಚೆಸ್ ಟ್ರೋಫಿ ನೀಡಿದ ಗುಕೇಶ್
ಮಗನಿಗಾಗಿ ವೈದ್ಯ ವೃತ್ತಿ ತ್ಯಾಗ ಮಾಡಿದ ತಂದೆ ರಜನೀಕಾಂತ್
ಜೆ.ಪದ್ಮಕುಮಾರಿ ,ಡಿ.ಗುಕೇಶ್ , ರಜನೀಕಾಂತ್ | PTI
ಹೊಸದಿಲ್ಲಿ : ಸಿಂಗಾಪುರದಲ್ಲಿ ಗುರುವಾರ ನಡೆದ ವಿಶ್ವ ಚೆಸ್ ಚಾಂಪಿಯನ್ಶಿಪ್ನ 14ನೇ ಹಾಗೂ ಕೊನೆಯ ಪಂದ್ಯದಲ್ಲಿ ಚೀನಾದ ಡಿಂಗ್ ಲಿರೆನ್ರನ್ನು ಮಣಿಸಿದ ಡಿ.ಗುಕೇಶ್ ವಿಶ್ವ ಚೆಸ್ ಕಿರೀಟ ಧರಿಸಿದರು. ಪಂದ್ಯದ ಸುದ್ದಿಗಾಗಿ ಕಾತರದಿಂದ ಕಾಯುತ್ತಿದ್ದ ಗುಕೇಶ್ ತಾಯಿ ಜೆ.ಪದ್ಮಕುಮಾರಿ ಅವರು ತಮ್ಮ ಫೋನ್ ಹಾಗೂ ಕಂಪ್ಯೂಟರ್ನಿಂದ ದೂರ ಇದ್ದರು. ಗುಕೇಶನ ಚಿಕ್ಕಮ್ಮ ವಿಜಯದ ಸಂತೋಷದ ಸುದ್ದಿಯನ್ನು ಪದ್ಮಕುಮಾರಿಗೆ ತಿಳಿಸಿದರು.
ಭಾರತದ ಹೊಸ ಚೆಸ್ ಚಾಂಪಿಯನ್ ಆದ ಮಗನೊಂದಿಗೆ ಸಂಭ್ರಮಾಚರಣೆಯಲ್ಲಿ ತೊಡಗುವ ಮೊದಲು ಪದ್ಮಕುಮಾರಿ ತಮ್ಮ ಅತೀವ ಸಂತೋಷವನ್ನು ವ್ಯಕ್ತಪಡಿಸಿದರು. ಈ ಗೆಲುವು ಗುಕೇಶ್ ಅವರ ವೃತ್ತಿಜೀವನಕ್ಕಾಗಿ ಕುಟುಂಬದ ತ್ಯಾಗವನ್ನು ಪ್ರತಿಬಿಂಬಿಸಿತು.
ತನ್ನ ಹಿಂದೆ ಕುಳಿತಿದ್ದ ತಾಯಿಗೆ ಗುಕೇಶ್ ತಾನು ಗೆದ್ದ ಟ್ರೋಫಿಯನ್ನು ನೀಡಿದರು. ಟ್ರೋಫಿಯೊಂದಿಗೆ ತನ್ನ ಭಾವನಾತ್ಮಕ ಕ್ಷಣವನ್ನು ಹಂಚಿಕೊಂಡ ಪದ್ಮಕುಮಾರಿ ಟ್ರೋಫಿಗೆ ಮುತ್ತಿಟ್ಟರು.
ಪದ್ಮಕುಮಾರಿ ಅವರ ಪತಿ ರಜನೀಕಾಂತ್, ಇಎನ್ಟಿ ಸರ್ಜನ್ ಆಗಿದ್ದು, ಗುಕೇಶ್ರೊಂದಿಗೆ ಪ್ರಯಾಣಿಸಲು ತನ್ನ ವೃತ್ತಿಯನ್ನು ತ್ಯಾಗ ಮಾಡಿದ್ದಾರೆ. ಮೈಕ್ರೊಬಯೋಲಾಜಿಸ್ಟ್ ಆಗಿರುವ ಪದ್ಮಕುಮಾರಿ ಕುಟುಂಬ ನಿರ್ವಹಣೆ ಹೊಣೆ ಹೊತ್ತಿದ್ದರು.
ಇದು ನಿಜವಾಗಿಯೂ ಸಂತೋಷದ ಕ್ಷಣ. ಆದರೆ ನಾವು ಮಾಡಿದ ಎಲ್ಲ ತ್ಯಾಗಗಳನ್ನು ವಿಶೇಷವಾಗಿ ಗುಕೇಶ್ ಅವರ ತಂದೆಯ ತ್ಯಾಗವನ್ನು ನೆನಪಿಸಿಕೊಳ್ಳುವ ಸಮಯ ಇದಾಗಿದೆ. ಕುಟುಂಬ ಹಾಗೂ ಸ್ನೇಹಿತರ ಬೆಂಬಲದಿಂದ ಇದು ಸಾಧ್ಯವಾಯಿತು. ನಮ್ಮ ಎಲ್ಲ ಕುಟುಂಬ-ಅಜ್ಜ,ಅಜ್ಜಿ, ಅತ್ತೆ, ಸಹೋದರಿಯರು, ಸ್ನೇಹಿತರು ಎಲ್ಲರೂ ನಮ್ಮ ಪ್ರಯಾಣದಲ್ಲಿ ನಮಗೆ ಸಹಾಯ ಮಾಡಲು ಮುಂದೆ ಬಂದರು. ಪ್ರತಿಯೊಬ್ಬರಿಗೂ ನಾವು ಕೃತಜ್ಞರಾಗಿದ್ದೇವೆ ಎಂದು ಪದ್ಮಕುಮಾರಿ ಪಿಟಿಐಗೆ ತಿಳಿಸಿದ್ದಾರೆ.
ಗುಕೇಶ್ ಬಾಲ್ಯದಲ್ಲಿ ತುಂಬಾ ಕಷ್ಟಪಟ್ಟಿದ್ದ. ಈ ಗೆಲುವಿನ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ. ಆತ ಅತ್ಯಂತ ಶಿಸ್ತಿನ ಮಗು. ಚೆಸ್ಗಾಗಿ ತುಂಬಾ ತ್ಯಾಗ ಮಾಡಿದ್ದಾನೆ ಎಂದು ಪದ್ಮಕುಮಾರಿ ಹೇಳಿದರು.
ತನ್ನ ಹೆತ್ತವರ ಆರ್ಥಿಕ ಸಂಕಷ್ಟಗಳನ್ನು ಹಾಗೂ ತನ್ನ ಚೆಸ್ ವೃತ್ತಿಜೀವನಕ್ಕಾಗಿ ಅವರು ಮಾಡಿದ ತ್ಯಾಗವನ್ನು ನೆನಪಿಸಿದ ಗುಕೇಶ್, ನಮ್ಮದು ತುಂಬಾ ಶ್ರೀಮಂತ ಕುಟುಂಬವಾಗಿರಲಿಲ್ಲ. ಆದ್ದರಿಂದ ಸಾಕಷ್ಟು ಆರ್ಥಿಕ ಸಂಕಷ್ಟಗಳನ್ನು ಎದುರಿಸಬೇಕಾಯಿತು. 2017 ಹಾಗೂ 2018ರಲ್ಲಿ ನಮಗೆ ಹಣಕಾಸು ಸಮಸ್ಯೆ ಜಾಸ್ತಿಯಾಗಿತ್ತು. ನನ್ನ ಪೋಷಕರ ಸ್ನೇಹಿತರು ನನಗೆ ಪ್ರಾಯೋಜಕತ್ವ ನೀಡಿದರು. ನಾನು ಪಂದ್ಯಾವಳಿಗಳನ್ನು ಆಡಲು ನನ್ನ ಪೋಷಕರು ಜೀವನಶೈಲಿಯನ್ನು ಬದಲಾಯಿಸಬೇಕಾಯಿತು. ಅವರು ಹೆಚ್ಚು ತ್ಯಾಗ ಮಾಡಿದರು ಎಂದರು.
►ಗುಕೇಶ್ ವೃತ್ತಿಜೀವನ
ಚೆನ್ನೈನ ದೈತ್ಯ ಪ್ರತಿಭೆ ಗುಕೇಶ್ 7ನೇ ವಯಸ್ಸಿನಲ್ಲಿ ತನ್ನ ಚೆಸ್ ಪಯಣ ಆರಂಭಿಸಿದರು. ಶಾಲೆಯಲ್ಲಿ ಚೆಸ್ ಕಲಿತ ಆರು ತಿಂಗಳೊಳಗೆ ಫಿಡೆ ರೇಟ್ ಆಟಗಾರನಾದರು. 2015ರಲ್ಲಿ ಅಂಡರ್-9 ಏಶ್ಯನ್ ಶಾಲೆಗಳ ಚೆಸ್ ಚಾಂಪಿಯನ್ಶಿಪ್ ಜಯಿಸುವ ಮೂಲಕ ತನ್ನ ಮೊದಲ ಅಂತರ್ರಾಷ್ಟ್ರೀಯ ಯಶಸ್ಸು ಕಂಡರು. ಈ ಮೂಲಕ ಕ್ಯಾಂಡಿಡೇಟ್ ಮಾಸ್ಟರ್ಸ್ ಪ್ರಶಸ್ತಿಯನ್ನು ಪಡೆದರು.
2018ರಲ್ಲಿ ಅಂಡರ್-12 ವರ್ಲ್ಡ್ ಯೂತ್ ಚೆಸ್ ಚಾಂಪಿಯನ್ಶಿಪ್ ಗೆದ್ದಿರುವ ಗುಕೇಶ್, 2018ರ ಏಶ್ಯನ್ ಯೂತ್ ಚೆಸ್ ಚಾಂಪಿಯನ್ಶಿಪ್ನಲ್ಲಿ ಅಂಡರ್-12 ವೈಯಕ್ತಿಕ ರ್ಯಾಪಿಡ್ ಆ್ಯಂಡ್ ಬ್ಲಿಝ್, ಅಂಡರ್-12 ಟೀಮ್ ರ್ಯಾಪಿಡ್ ಆ್ಯಂಡ್ ಬ್ಲಿಝ್, ಅಂಡರ್-12 ವೈಯಕ್ತಿಕ ಕ್ಲಾಸಿಕಲ್ ಮಾದರಿಗಳಲ್ಲಿ ಐದು ಚಿನ್ನದ ಪದಕಗಳನ್ನು ಬಾಚಿಕೊಂಡಿದ್ದರು.
2018ರ ಮಾರ್ಚ್ನಲ್ಲಿ ಅಂತರ್ರಾಷ್ಟ್ರೀಯ ಮಾಸ್ಟರ್ಸ್(ಐಎಂ)ಪ್ರಶಸ್ತಿಗೆ ಬೇಕಾದ ಅಗತ್ಯತೆಗಳನ್ನು ಪೂರೈಸಿದರು. 2019ರ ಜನವರಿಯಲ್ಲಿ 12 ವರ್ಷ, 7 ತಿಂಗಳು, 17 ದಿನಗಳಲ್ಲಿ ಗ್ರ್ಯಾಂಡ್ ಮಾಸ್ಟರ್ ಎನಿಸಿಕೊಂಡ ಎರಡನೇ ಕಿರಿಯ ವಯಸ್ಸಿನ ಚೆಸ್ ತಾರೆ ಎನಿಸಿಕೊಂಡರು. ಅಭಿಮನ್ಯು ಮಿಶ್ರಾ ಈ ದಾಖಲೆ ಮುರಿದ ಕಾರಣ ಗುಕೇಶ್ 3ನೇ ಕಿರಿಯ ಜಿಎಂ ಆಗಿದ್ದಾರೆ.
2022ರಲ್ಲಿ ಚೆನ್ನೈನಲ್ಲಿ ನಡೆದಿದ್ದ 44ನೇ ಚೆಸ್ ಒಲಿಂಪಿಯಾಡ್ನಲ್ಲಿ 11ರಲ್ಲಿ 9 ಅಂಕ ಗಳಿಸಿ ವೈಯಕ್ತಿಕ ಚಿನ್ನದ ಪದಕ ಜಯಿಸಿದ್ದರು. ಭಾರತವು ಕಂಚಿನ ಪದಕ ಗೆಲ್ಲಲು ನೆರವಾಗಿದ್ದರು. ಅದೇ ವರ್ಷ ಮೊದಲ ಬಾರಿ 2,700 ರೇಟಿಂಗ್ ಪಾಯಿಂಟ್ಸ್ ಪಡೆದರು.
►ಇತಿಹಾಸ ನಿರ್ಮಾಣ: ಏಮ್ ಚೆಸ್ ರ್ಯಾಪಿಡ್ ಟೂರ್ನಮೆಂಟ್ನಲ್ಲಿ ಮ್ಯಾಗ್ನಸ್ ಕಾರ್ಲ್ಸನ್ರನ್ನು ಮಣಿಸಿದ ಯುವ ಆಟಗಾರ ಎನಿಸಿಕೊಂಡಿದ್ದರು. 2023ರಲ್ಲೂ ಇದೇ ಪ್ರದರ್ಶನ ಮುಂದುವರಿಸಿ 2,750 ರೇಟಿಂಗ್ಪಾಯಿಂಟ್ಸ್ ಪಡೆದ ಅತಿ ಕಿರಿಯ ಆಟಗಾರ ಎನಿಸಿಕೊಂಡರು. ಅವರು ಶೀಘ್ರದಲ್ಲೇ ವಿಶ್ವನಾಥನ್ ಆನಂದ್ ರನ್ನು ಹಿಂದಿಕ್ಕಿ 37 ವರ್ಷಗಳಲ್ಲಿ ಮೊದಲ ಬಾರಿ ಅಗ್ರ ಶ್ರೇಯಾಂಕದ ಭಾರತೀಯ ಆಟಗಾರನಾದರು.
2023ರ ಡಿಸೆಂಬರ್ನಲ್ಲಿ 2024ರ ಕ್ಯಾಂಡಿಡೇಟ್ಸ್ ಟೂರ್ನಮೆಂಟ್ಗೆ ಅರ್ಹತೆ ಪಡೆದರು. ಬಾಬಿ ಫಿಶ್ಚರ್ ಹಾಗೂ ಕಾರ್ಲ್ಸನ್ ನಂತರ ಕ್ಯಾಂಡಿಡೇಟ್ಸ್ ಟೂರ್ನಮೆಂಟ್ ಆಡಿದ 3ನೇ ಯುವ ಚೆಸ್ ಆಟಗಾರ ಎನಿಸಿಕೊಂಡರು.
ಎಪ್ರಿಲ್ನಲ್ಲಿ ಫಿಡೆ ಕ್ಯಾಂಡಿಡೇಟ್ಸ್ ಟೂರ್ನಮೆಂಟ್ ಜಯಿಸಿದ ಕಿರಿಯ ವಯಸ್ಸಿನ ಚೆಸ್ ತಾರೆ ಎನಿಸಿಕೊಂಡ ಗುಕೇಶ್ ಅವರು ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ನಂತರ ವಿಶ್ವ ಚಾಂಪಿಯನ್ಶಿಪ್ ಫೈನಲ್ಗೆ ತಲುಪಿದ ಭಾರತದ 2ನೇ ಚೆಸ್ ತಾರೆ ಎನಿಸಿಕೊಂಡಿದ್ದರು.