ನಿರಾಶ್ರಿತರಿಗೆ ದೀಪಾವಳಿ ದಿನ ಸದ್ದಿಲ್ಲದೇ ಉಡುಗೊರೆ ನೀಡಿದ ಗುರ್ಬಾಝ್
ಅಹಮದಾಬಾದ್ ಬೀದಿಯಲ್ಲಿ ದೀಪಾವಳಿ ಆಚರಿಸಿದ ಅಫ್ಘಾನ್ ಕ್ರಿಕೆಟಿಗ!
Photo : cricketworldcup.com
ಅಹಮದಾಬಾದ್ : ವಿಶ್ವಕಪ್ ಪಯಣ ಅಂತ್ಯಗೊಂಡು ಅಫ್ಘಾನಿಸ್ತಾನ ತಂಡ ತವರಿಗೆ ಮರಳಿದ್ದರೂ, ಅಹಮದಾಬಾದ್ನ ಬೀದಿ ಬದಿಯ ನಿರಾಶ್ರಿತರು, ದೀಪಾವಳಿ ಹಬ್ಬದಂದು ಅಫ್ಘಾನಿಸ್ತಾನ ಕ್ರಿಕೆಟಿಗನ ಹೆಸರಿನಲ್ಲಿ ದೀಪ ಹಚ್ಚಿದ್ದಾರೆ. ಪ್ರಚಾರ ಬಯಸದ, ಕ್ಯಾಮೆರಾದೊಂದಿಗೆ ತೆರಳದ ಅಫ್ಘಾನ್ ಬ್ಯಾಟರ್ ರಹ್ಮತುಲ್ಲಾ ಗುರ್ಬಾಝ್ ಬೆಳಗಿನ ಜಾವ 3 ಗಂಟೆಗೆ ಒಬ್ಬರೇ ಹೋಗಿ ಬೀದಿ ಬದಿಯಲ್ಲಿ ಮಲಗಿದ್ದ ನಿರಾಶ್ರಿತರ ಬಳಿ 500 ರೂ. ಹಣ ಇಟ್ಟು ತಮ್ಮಷ್ಟಕ್ಕೆ ಕಾರು ಏರಿ ಹೋಗಿದ್ದಾರೆ.
ಈ ಘಟನೆಯನ್ನು ನೆಟ್ಟಿಗರೊಬ್ಬರು ಕುತೂಹಲದಿಂದ ಸೆರೆ ಹಿಡಿದು ಸಾಮಾಜಿಕ ಜಾಲ ತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಫ್ಘಾನ್ ಕ್ರಿಕೆಟಿಗ ವಿಶಾಲ ಹೃದಯಕ್ಕೆ ನೆಟ್ಟಿಗರು ಮನಸೋತು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆರ್ ಜೆ ಲವ್ ಶಾ ಎಂಬ ಇನ್ಸ್ಟಾಗ್ರಾಂ ಬಳಕೆದಾರರು ಈ ವೀಡಿಯೊ ಸೆರೆ ಹಿಡಿದು “ನಿಮಗೂ ದೀಪಾವಳಿ ಶುಭಾಷಯಗಳು ರಹ್ಮತುಲ್ಲಾ ಗುರ್ಬಾಝ್ʼ ಎಂದು ಭಾವುಕಾರಾಗಿ ವೀಡಿಯೊ ಹಂಚಿಕೊಂಡಿದ್ದರು. ಬಳಿಕ ಅದನ್ನು ಇತರ ಸಾಮಾಜಿಕ ಜಾಲತಾಣ ಬಳಕೆದಾರರು ಹಂಚಿಕೊಂಡಿದ್ದಾರೆ.
ಮಿ.ವಾಲಿ ಎನ್ನುವವರು “ಅಫ್ಘಾನಿಸ್ತಾನ ಕ್ರಿಕೆಟಿಗರ ಬಳಿ ಹಣ ಇಲ್ಲದಿರಬಹುದು. ಆದರೆ ದೊಡ್ಡ ಮನಸ್ಸಿದೆ” ಎಂದು ಕೊಂಡಾಡಿದ್ದಾರೆ. ಸ್ಕಾ ಎಂಬವರು “ಅಫ್ಘಾನಿಸ್ತಾನ ವಿಶ್ವಕಪ್ ಗೆಲ್ಲದಿದ್ದರೂ, ಅವರು ಭಾರತದ ಮನ ಗೆದ್ದಿದ್ದಾರೆ” ಎಂದು ಬರೆದುಕೊಂಡಿದ್ದಾರೆ. ಡಿಂಪಲ್ ಎಂಬ ಬಳಕೆದಾರರು, “ಈ ಆಟಗಾರನಿಗೆ ನನ್ನ ನಮನಗಳು. ಹಿಂದೂ ಮುಸ್ಲಿಂ ಎಂಬ ಪ್ರಶ್ನೆ ಮುಖ್ಯವಲ್ಲ. ಹೃದಯ ಚೆನ್ನಾಗಿರಬೇಕು” ಎಂದು ಕಮೆಂಟ್ ಮಾಡಿದ್ದಾರೆ. ರಾಹುಲ್ ಎಂಬವರು, “ಪಟಾಕಿ ಎಲ್ಲರೂ ಹೊಡೆಯುತ್ತಾರೆ. ದೀಪಾವಳಿಯ ಅರ್ಥ ಇನ್ನೊಬ್ಬರ ಮನೆ ಬೆಳಗಿಸು ಎನ್ನುವುದು. ಇದೇ ನಿಜವಾದ ದೀಪಾವಳಿ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.