ಹಾಕಿ | ಅರ್ಜೆಂಟೀನ ವಿರುದ್ಧ ಭಾರತದ ಪುರುಷರ ತಂಡಕ್ಕೆ ರೋಚಕ ಜಯ
ಎಫ್ಐಎಚ್ ಪ್ರೊ ಲೀಗ್ ; ಹರ್ಮನ್ಪ್ರೀತ್ ಹ್ಯಾಟ್ರಿಕ್
Photo: x.com/sportstarweb
ಆಂಟ್ವರ್ಪ್(ಬೆಲ್ಜಿಯಮ್): ಬೆಲ್ಜಿಯಂ ನ ಆಂಟ್ವರ್ಪ್ನಲ್ಲಿ ರವಿವಾರ ನಡೆದ ಎಫ್ಐಎಚ್ ಪ್ರೊ ಲೀಗ್ನ ಪುರುಷರ ಹಾಕಿ ಸ್ಪರ್ಧೆಯಲ್ಲಿ ಕೊನೆಯ ಕ್ಷಣದ ಆತಂಕದಿಂದ ಹೊರಬಂದ ಭಾರತ ತಂಡ ನಾಯಕ ಹರ್ಮನ್ಪ್ರೀತ್ ಸಿಂಗ್ ಹ್ಯಾಟ್ರಿಕ್ ಗೋಲು(29ನೇ, 50ನೇ ಹಾಗೂ 52ನೇ ನಿಮಿಷ) ನೆರವಿನಿಂದ ಅರ್ಜೆಂಟೀನವನ್ನು 5-4 ಅಂತರದಿಂದ ರೋಚಕವಾಗಿ ಮಣಿಸಿದೆ.
ಫೆಡರಿಕೊ ಮೊಂಜಾ ಮೂರು ನಿಮಿಷದೊಳಗೆ ಅರ್ಜೆಂಟೀನಕ್ಕೆ ಆರಂಭಿಕ ಮುನ್ನಡೆ ಒದಗಿಸಿಕೊಟ್ಟರು. ಆದರೆ ಅರೈಜೀತ್ ಸಿಂಗ್(7ನೇ ನಿಮಿಷ) ಹಾಗೂ ಗುರ್ಜಂತ್ ಸಿಂಗ್(18ನೇ ನಿಮಿಷ) ತಲಾ ಒಂದು ಗೋಲು ಗಳಿಸಿ ಭಾರತಕ್ಕೆ 2-1 ಮುನ್ನಡೆ ಒದಗಿಸಿಕೊಟ್ಟರು. ನಿಕೊಲಸ್ ಕೀನನ್ 24ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರನ್ನು ಗೋಲಾಗಿ ಪರಿವರ್ತಿಸಿ ಸ್ಕೋರನ್ನು ಸಮಬಲಗೊಳಿಸಿದರು. ಮೊದಲಾರ್ಧಕ್ಕಿಂತ ಮೊದಲು ಭಾರತೀಯ ನಾಯಕ ಹರ್ಮನ್ಪ್ರೀತ್ ಕೌರ್(29ನೇ ನಿಮಿಷ) ಪೆನಾಲ್ಟಿ ಕಾರ್ನರನ್ನು ಗೋಲಾಗಿ ಪರಿವರ್ತಿಸಿ ಭಾರತಕ್ಕೆ 3-2 ಮುನ್ನಡೆ ಒದಗಿಸಿಕೊಟ್ಟರು.
ಉಭಯ ತಂಡಗಳು ಆಕ್ರಮಣಕಾರಿ ಆಟ ಮುಂದುವರಿಸಿದರೂ ಮೂರನೇ ಕ್ವಾರ್ಟರ್ನಲ್ಲಿ ಗೋಲು ಗಳಿಸಲಿಲ್ಲ.
ಕೊನೆಯ ಕ್ವಾರ್ಟರ್ನಲ್ಲಿ ಭಾರತ ಎರಡು ನಿಮಿಷಗಳಲ್ಲಿ ಎರಡು ಪೆನಾಲ್ಟಿ ಸ್ಟ್ರೋಕ್ ಪಡೆಯಿತು. ಹರ್ಮನ್ಪ್ರೀತ್ ಈ ಎರಡನ್ನು ಗೋಲಾಗಿ ಪರಿವರ್ತಿಸಿ ಹ್ಯಾಟ್ರಿಕ್ ಪೂರೈಸಿ ತಂಡದ ಮುನ್ನಡೆ 5-2ಕ್ಕೆ ಹೆಚ್ಚಿಸಿದರು. ಪಂದ್ಯ ಮುಗಿಯಲು 3 ನಿಮಿಷ ಬಾಕಿ ಇರುವಾಗ ಟಡೆವೊ ಮಾರ್ಕುಸಿ(54ನೇ ನಿಮಿಷ) ಹಾಗೂ ಲುಕಾಸ್ ಮಾರ್ಟಿನೆಝ್(57ನೇ ನಿಮಿಷ) ತಲಾ ಒಂದು ಗೋಲು ಗಳಿಸಿ ಸೋಲಿನ ಅಂತರ ತಗ್ಗಿಸಿದರು.
ಅಂತಿಮವಾಗಿ ಭಾರತ ತಂಡ ಯುರೋಪ್ನಲ್ಲಿ ತನ್ನ ಮೊದಲ ಜಯ ಸಾಧಿಸಿತು. 12 ಪಂದ್ಯಗಳಲ್ಲಿ 21 ಅಂಕ ಗಳಿಸಿದ ಕ್ರೆಗ್ ಫುಲ್ಟನ್ ತಂಡ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.
ಜೂನ್ 1ರಿಂದ 9ರ ತನಕ ಜರ್ಮನಿ ಹಾಗೂ ಗ್ರೇಟ್ ಬ್ರಿಟನ್ ವಿರುದ್ಧ ಲಂಡನ್ನಲ್ಲಿ ತಲಾ 2 ಪಂದ್ಯಗಳನ್ನು ಆಡುವ ಮೂಲಕ ತನ್ನ ಋತುವನ್ನು ಕೊನೆಗೊಳಿಸಲಿದೆ. ಭಾರತವು ಜೂನ್ 1ರಂದು ಜರ್ಮನಿ ತಂಡವನ್ನು ಎದುರಿಸಲಿದೆ.