'ಅಶ್ವಿನ್ ಜೊತೆ ವೈಮನಸ್ಸು' ಸುದ್ದಿ ಬಗ್ಗೆ ಮೌನ ಮುರಿದ ಹರ್ಭಜನ್ ಸಿಂಗ್
ರವಿಚಂದ್ರನ್ ಅಶ್ವಿನ್ ಮತ್ತು ಹರ್ಭಜನ್ ಸಿಂಗ್ (Photo: PTI)
ಹೊಸದಿಲ್ಲಿ: ಭಾರತೀಯ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಬೆನ್ನಿಗೇ, ರವಿಚಂದ್ರನ್ ಅಶ್ವಿನ್ ಅವರೊಂದಿಗೆ ವೈಮನಸ್ಸಿತ್ತು ಎಂದು ಹರಡಿರುವ ವದಂತಿಗಳ ಕುರಿತು ಮೌನ ಮುರಿದಿರುವ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ಅಂತಹ ವದಂತಿಗಳನ್ನು ಅಲ್ಲಗಳೆದಿದ್ದಾರೆ.
ಈ ಕುರಿತು ತಮ್ಮ ಯೂಟ್ಯೂಬ್ ವಾಹಿನಿಯಲ್ಲಿ ಸ್ಪಷ್ಟೀಕರಣ ನೀಡಿರುವ ಹರ್ಭಜನ್ ಸಿಂಗ್, “ಸಾಮಾಜಿಕ ಮಾಧ್ಯಮಗಳನ್ನು ನನಗೆಷ್ಟು ಬೇಕೊ ಅಷ್ಟು ಮಾತ್ರ ಓದುತ್ತೇನೆ. ನನ್ನ ಮತ್ತು ಅಶ್ವಿನ್ ನಡುವೆ ವೈಮನಸ್ಸಿದ್ದಿದ್ದರೆ ಅಥವಾ ಜಗಳ, ಕದನ ಅಥವಾ ಭಿನ್ನಾಭಿಪ್ರಾಯವಿದ್ದಿದ್ದರೆ, ಏನು ಸಮಸ್ಯೆ ಎಂದು ಅವರನ್ನು ಕೇಳುತ್ತಿದ್ದ ಮೊದಲ ವ್ಯಕ್ತಿ ನಾನೇ ಆಗಿರುತ್ತಿದ್ದೆ” ಎಂದು ಹೇಳಿದ್ದಾರೆ.
“ಆದರೆ, ಹಾಗೆ ಎಂದೂ ಇರಲಿಲ್ಲ ಮತ್ತು ಹಾಗೆ ಎಂದೂ ಆಗಲು ಸಾಧ್ಯವಿರಲಿಲ್ಲ. ಅವರ ಹಣೆಬರಹದಲ್ಲಿ ಏನು ಬರೆದಿತ್ತೊ ಅದನ್ನು ಅವರು ಪಡೆದಿದ್ದಾರೆ, ನನ್ನ ಹಣೆಬರಹದಲ್ಲಿ ಏನು ಬರೆದಿತ್ತೊ ಅದನ್ನು ನಾನು ಪಡೆದಿದ್ದೇನೆ. ಅವರು ಭಾರತದ ಪಾಲಿಗೆ ಅದ್ಭುತ ಬೌಲರ್ ಆಗಿದ್ದರು” ಎಂದು ಅವರು ಪ್ರಶಂಸಿಸಿದ್ದಾರೆ. “ನಾನು ಅವರ ಸಾಧನೆಯಿಂದ ತುಂಬಾ ಸಂತಸತೊಂಡಿದ್ದೇನೆ” ಎಂದೂ ಹೇಳಿದ್ದಾರೆ.
“ಒಂದು ವೇಳೆ ಜನರು ಟ್ವಿಟರ್ ನಲ್ಲಿ ವಿಷಯಗಳನ್ನು ತಿರುಚಿ, ನನಗೆ ಅಶ್ವಿನ್ ರೊಂದಿಗೆ ಸಮಸ್ಯೆ ಇತ್ತು ಎಂದು ಹೇಳಿದರೆ ಅದು ಅವರ ದೃಷ್ಟಿಕೋನ. ನಾನು ವಾಚಾಳಿಯಾಗಿರುವುದರಿಂದ, ಭಾರತದಲ್ಲಿನ ಕ್ರಿಕೆಟ್ ಪಿಚ್ ಗಳ ಕುರಿತು ಮಾತನಾಡುತ್ತಿರುತ್ತೇನೆ. ಅವು ಉತ್ತಮ ಪಿಚ್ ಅಲ್ಲದೆ ಇರುವುದರಿಂದ, ಬಾಲ್ ಗಳು ಸಾಕಷ್ಟು ತಿರುವು ಪಡೆದು, ಪಂದ್ಯ ಎರಡೂವರೆ ದಿನಗಳಲ್ಲೇ ಮುಗಿದು ಹೋಗುತ್ತದೆ” ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.
“ನಾನು ಈ ಬಗ್ಗೆ ಹೆಚ್ಚು ವಾಚಾಳಿಯಾಗಿರುವುದರಿಂದ, ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸದ್ದಾಗುತ್ತದೆ ಹಾಗೂ ನನಗೆ ಯಾವುದೋ ವ್ಯಕ್ತಿಯೊಂದಿಗೆ ಸಮಸ್ಯೆ ಇದೆ ಎಂದು ಜನರು ಭಾವಿಸುತ್ತಾರೆ” ಎಂದು ಅವರು ಸಮಜಾಯಿಷಿ ನೀಡಿದ್ದಾರೆ.
ಬ್ರಿಸ್ಬೇನ್ ನಲ್ಲಿ ನಡೆದ ಭಾರತ-ಆಸ್ಟ್ರೇಲಿಯ ತಂಡಗಳ ನಡುವಿನ ಮೂರನೆಯ ಟೆಸ್ಟ್ ಪಂದ್ಯದ ವೇಳೆ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು. 38 ವರ್ಷದ ರವಿಚಂದ್ರನ್ ಅಶ್ವಿನ್, ಭಾರತದ ಪರ ಅತಿ ಹೆಚ್ಚು ವಿಕೆಟ್ ಗಳಿಸಿರುವ ಎರಡನೆ ಬೌಲರ್ ಆಗಿದ್ದಾರೆ. ಭಾರತದ ಪರ ಅತಿ ಹೆಚ್ಚು ವಿಕೆಟ್ ಗಳಿಸಿದ ದಾಖಲೆ ಅನಿಲ್ ಕುಂಬ್ಳೆ ಹೆಸರಿನಲ್ಲಿ ಉಳಿದಿದೆ.