ಹಾರ್ದಿಕ್ ಪಾಂಡ್ಯ ಮಾಜಿ ನಾಯಕ ಎಂ.ಎಸ್. ಧೋನಿ ಆಗುವ ಅಗತ್ಯವಿಲ್ಲ ಎಂದ ಆಕಾಶ್ ಚೋಪ್ರಾ
ತಿಲಕ್ ವರ್ಮಾಗೆ ಅರ್ಧಶತಕ ನಿರಾಕರಿಸಿದ್ದಕ್ಕಾಗಿ ಟೀಕೆಗೆ ಗುರಿಯಾಗಿದ್ದ ಪಾಂಡ್ಯ
ಆಕಾಶ್ ಚೋಪ್ರಾ | Photo: Instagram/ Aakash Chopra
ಹೊಸದಿಲ್ಲಿ: ವೆಸ್ಟ್ಇಂಡೀಸ್ ವಿರುದ್ಧ 3ನೇ ಟ್ವೆಂಟಿ-20 ಪಂದ್ಯದಲ್ಲಿ ಯುವ ಆಟಗಾರ ತಿಲಕ್ ವರ್ಮಾಗೆ ಅರ್ಧಶತಕ ನಿರಾಕರಿಸಿದ್ದಕ್ಕಾಗಿ ಭಾರತದ ಟಿ-20 ತಂಡದ ನಾಯಕ ಹಾರ್ದಿಕ್ ಪಾಂಡ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗ ಹಾಗೂ ಈಗ ವೀಕ್ಷಕವಿವರಣೆಗಾರನಾಗಿರುವ ಆಕಾಶ್ ಚೋಪ್ರಾ, ಹಾರ್ದಿಕ್ ರನ್ನು ಬೆಂಬಲಿಸಿದ್ದಾರೆ. ಹಾರ್ದಿಕ್ ಅವರು ಧೋನಿಯವರನ್ನು ತನ್ನ ಆದರ್ಶ ಎಂದು ಪರಿಗಣಿಸಿದ್ದರೂ ಕೂಡ ಅವರು ಮಾಜಿ ನಾಯಕನಂತೆ ಆಗುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಹಾರ್ದಿಕ್ ಪಾಂಡ್ಯ ಸಾಕಷ್ಟು ಟ್ರೋಲ್ಗೆ ಒಳಗಾಗಿದ್ದಾರೆ. ಅವರು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ. ನೀವು ಒಂದು ಮೈಲಿಗಲ್ಲಿನ ಬಗ್ಗೆ ಏಕೆ ಯೋಚಿಸುತ್ತೀರಿ? ಟಿ-20 ವಿಶ್ವಕಪ್ನಲ್ಲಿ ಇನ್ನೊಂದು ತುದಿಯಲ್ಲಿದ್ದ ವಿರಾಟ್ ಕೊಹ್ಲಿ ಇನಿಂಗ್ಸನ್ನು ಮುಗಿಸಬೇಕೆಂದು ಬಯಸಿದ್ದ ಧೋನಿ ಚೆಂಡನ್ನು ಉಳಿಸಿಕೊಂಡಿರುವುದು ನನಗೆ ನೆನಪಿದೆ. ಅದು ಧೋನಿಯ ಕಾರ್ಯವೈಖರಿ. ಹಾರ್ದಿಕ್, ಧೋನಿಯಂತಾಗಬೇಕಾಗಿಲ್ಲ. ಹಾರ್ದಿಕ್, ಧೋನಿಯನ್ನು ತನ್ನ ಆದರ್ಶ ಎಂದು ಪರಿಗಣಿಸಿದ್ದರೂ ಅವರಂತೆ ವರ್ತಿಸುವ ಅಗತ್ಯವಿಲ್ಲ ಎಂದರು.
ತಿಲಕ್ ಔಟಾಗದೆ 49 ರನ್ ಗಳಿಸಿ ನಾನ್ ಸ್ಟ್ರೈಕ್ನಲ್ಲಿದ್ದಾಗ ಹಾರ್ದಿಕ್ ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ತಿಲಕ್ಗೆ ಅರ್ಧಶತಕ ನಿರಾಕರಿಸಿದ್ದಕ್ಕೆ ಅಭಿಮಾನಿಗಳಿಂದ ಟೀಕೆಗೆ ಒಳಗಾಗಿದ್ದರು. ಹಾರ್ದಿಕ್ ಸಿಕ್ಸರ್ ಬಾರಿಸಿದ್ದು ಅಭಿಮಾನಿಗಳಿಗೆ ಸರಿ ಕಂಡಿಲ್ಲ. ಹಾರ್ದಿಕ್ ಅವರು ಎಂಎಸ್ ಧೋನಿಯಂತೆ ನಿಸ್ವಾರ್ಥದಿಂದ ವರ್ತಿಸಬೇಕಿತ್ತು ಎಂದು ಹೇಳಿದ್ದರು.
2014ರ ಟಿ-20 ವಿಶ್ವಕಪ್ನ ಸೆಮಿ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 7 ಎಸೆತಗಳಲ್ಲಿ ಗೆಲ್ಲಲು 1 ರನ್ ಅಗತ್ಯವಿತ್ತು. ಸ್ಟ್ರೈಕ್ನಲ್ಲಿದ್ದ ಧೋನಿ ಅವರು ಔಟಾಗದೆ 67 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಪಂದ್ಯ ಮುಗಿಸಬೇಕೆಂಬ ಉದ್ದೇಶದಿಂದ ರನ್ ಗಳಿಸದೆ ಚೆಂಡನ್ನು ರಕ್ಷಣಾತ್ಮಕವಾಗಿ ಎದುರಿಸಿದ್ದರು. ನೀವೇ ಪಂದ್ಯವನ್ನು ಮುಗಿಸಿ ಎಂದು ಧೋನಿ ಅವರು ಕೊಹ್ಲಿಗೆ ಸನ್ನೆ ಮಾಡಿದ್ದು ಎಲ್ಲರ ಹೃದಯ ಗೆದ್ದಿತ್ತು.