ಮುಂಬೈ ಇಂಡಿಯನ್ಸ್ ಪರ 100ನೇ ಐಪಿಎಲ್ ಪಂದ್ಯವಾಡಿದ ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ | PC : NDTV
ಹೊಸದಿಲ್ಲಿ : ರಾಜಸ್ಥಾನ ರಾಯಲ್ಸ್ ವಿರುದ್ಧ ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಮ್ನಲ್ಲಿ ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ಆಡುವ ಮೂಲಕ ನಾಯಕ ಹಾರ್ದಿಕ್ ಪಾಂಡ್ಯ ಮಹತ್ವದ ಮೈಲಿಗಲ್ಲು ತಲುಪಿದರು. ಪಾಂಡ್ಯ ಮುಂಬೈ ಇಂಡಿಯನ್ಸ್ ಪರ 100ನೇ ಪಂದ್ಯ ಆಡಿದ್ದಾರೆ.
ರಾಜಸ್ಥಾನ ತಂಡ ಜೈಪುರದಲ್ಲಿ ಪ್ರಸಕ್ತ ಋತುವಿನಲ್ಲಿ 5ನೇ ಹಾಗೂ ಅಂತಿಮ ಪಂದ್ಯ ಆಡಿದ್ದು, ತವರು ಮೈದಾನದಲ್ಲಿ ಈ ತನಕ 3ರಲ್ಲಿ ಜಯ, ಕೇವಲ 1ರಲ್ಲಿ ಸೋತಿದೆ.
ಹಿಂದಿನ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 2 ವಿಕೆಟ್ ಅಂತರದಿಂದ ರೋಚಕ ಜಯ ಸಾಧಿಸಿರುವ ರಾಜಸ್ಥಾನ ತಂಡ ಐಪಿಎಲ್-2024ರಲ್ಲಿ ಆಡಿರುವ 7 ಪಂದ್ಯಗಳಲ್ಲಿ ಆರರಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ.
ಮತ್ತೊಂದೆಡೆ ಮುಂಬೈ ತಂಡವು ತನ್ನ ಹಿಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 9 ರನ್ನಿಂದ ರೋಚಕ ಜಯ ಸಾಧಿಸಿದೆ. ಲೀಗ್ನಲ್ಲಿ ತನ್ನ ಪ್ರದರ್ಶನ ಸುಧಾರಿಸಿಕೊಳ್ಳುವ ವಿಶ್ವಾಸದಲ್ಲಿದೆ.
ಪಾಂಡ್ಯ 100ನೇ ಬಾರಿ ಮುಂಬೈ ಇಂಡಿಯನ್ಸ್ ತಂಡದ ಜೆರ್ಸಿ ಧರಿಸಿದ್ದಾರೆ. ಈ ಮೊದಲು 2015ರಿಂದ 2021ರ ತನಕ ಮುಂಬೈ ತಂಡವನ್ನು ಪ್ರತಿನಿಧಿಸಿದ್ದ ಪಾಂಡ್ಯ 2015, 2017, 2019 ಹಾಗೂ 2020ರಲ್ಲಿ ಮುಂಬೈ ಐಪಿಎಲ್ ಪ್ರಶಸ್ತಿ ಗೆಲ್ಲುವಲ್ಲಿ ನಿರ್ಣಾಯಕ ಕೊಡುಗೆ ನೀಡಿದ್ದರು.
ಗುಜರಾತ್ ಟೈಟಾನ್ಸ್ನೊಂದಿಗೆ ಎರಡು ವರ್ಷ ಯಶಸ್ವಿ ಪ್ರದರ್ಶನ ನೀಡಿದ್ದ ಪಾಂಡ್ಯ ಇದೀಗ ಮುಂಬೈ ತಂಡಕ್ಕೆ ವಾಪಸಾಗಿದ್ದು, ಹಿಂದಿನ ಯಶಸ್ಸು ಪುನರಾವರ್ತಿಸುವ ಗುರಿ ಇಟ್ಟುಕೊಂಡಿದ್ದಾರೆ.
ಐಪಿಎಲ್ ವೃತ್ತಿಜೀವನದಲ್ಲಿ 130 ಪಂದ್ಯಗಳನ್ನು ಆಡಿರುವ ಪಾಂಡ್ಯ 29.88ರ ಸರಾಸರಿಯಲ್ಲಿ 2,450 ರನ್ ಗಳಿಸಿದ್ದಾರೆ. 57 ವಿಕೆಟ್ ಗಳನ್ನು ಉರುಳಿಸಿದ್ದಾರೆ.