ಐಪಿಎಲ್ ನಿಂದ ಹಿಂದೆ ಸರಿದ ಹ್ಯಾರಿ ಬ್ರೂಕ್ಗೆ ಎರಡು ವರ್ಷ ನಿಷೇಧ | ಬಿಸಿಸಿಐ ನಿರ್ಧಾರ ಸಮರ್ಥಿಸಿದ ಮೊಯಿನ್ ಅಲಿ, ಆದಿಲ್ ರಶೀದ್

ಹ್ಯಾರಿ ಬ್ರೂಕ್ , ಮೊಯಿನ್ ಅಲಿ ಹಾಗೂ ಸ್ಪಿನ್ನರ್ ಆದಿಲ್ ರಶೀದ್ | NDTV
ಹೊಸದಿಲ್ಲಿ: ಐಪಿಎಲ್ ನಿಂದ ಹ್ಯಾರಿ ಬ್ರೂಕ್ ಅವರನ್ನು ಎರಡು ವರ್ಷಗಳ ತನಕ ನಿಷೇಧಿಸಿರುವ ಬಿಸಿಸಿಐನ ನಿರ್ಧಾರವನ್ನು ಇಂಗ್ಲೆಂಡ್ ತಂಡದ ಮಾಜಿ ಆಲ್ರೌಂಡರ್ ಮೊಯಿನ್ ಅಲಿ ಹಾಗೂ ಸ್ಪಿನ್ನರ್ ಆದಿಲ್ ರಶೀದ್ ಬೆಂಬಲಿಸಿದ್ದಾರೆ.
ಈ ವರ್ಷದ ಐಪಿಎಲ್ ನಿಂದ ಹಿಂದೆ ಸರಿದ ನಂತರ ನಿಷೇಧ ಹೇರಲಾಗಿದೆ. ಕ್ರಿಕೆಟ್ ಮಂಡಳಿಯ ಹೊಸ ನಿಯಮದ ಪ್ರಕಾರ ಬ್ರೂಕ್ ಅವರು ಮುಂದಿನ ಎರಡು ವರ್ಷಗಳ ಕಾಲ ಹರಾಜಿನಲ್ಲಿ ಭಾಗವಹಿಸಲು ಅನರ್ಹರಾಗಿದ್ದಾರೆ.
‘ರಾಷ್ಟ್ರೀಯ ತಂಡದ ಬದ್ಧತೆಗಳಿಗೆ ತಯಾರಿ ನಡೆಸಲು ಸಮಯದ ಅಗತ್ಯವಿದೆ’ ಎಂದು ಉಲ್ಲೇಖಿಸಿ ಬ್ರೂಕ್ ಅವರು ಸತತ ಎರಡನೇ ವರ್ಷ ಐಪಿಎಲ್ ಟೂರ್ನಿಯಿಂದ ದೂರ ಉಳಿದಿದ್ದಾರೆ. ನವೆಂಬರ್ನಲ್ಲಿ ನಡೆದಿದ್ದ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬ್ರೂಕ್ ರನ್ನು 6.25 ಕೋಟಿ ರೂ.ಗೆ ತನ್ನ ಬಲೆಗೆ ಬೀಳಿಸಿಕೊಂಡಿತ್ತು. ಈ ಮೊದಲು ಸನ್ ರೈಸರ್ಸ್ ಹೈದರಾಬಾದ್ ತಂಡ 4 ಕೋಟಿ ರೂ.ಗೆ ಬ್ರೂಕ್ ರನ್ನು ತನ್ನದಾಗಿಸಿಕೊಂಡಿತ್ತು. ತನ್ನ ಅಜ್ಜಿಯ ನಿಧನದ ಕಾರಣ ನೀಡಿ 2024ರ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಬ್ರೂಕ್ ಹೊರಗುಳಿದಿದ್ದರು.
‘‘ನಿಷೇಧ ಶಿಕ್ಷೆ ಕಠಿಣವಲ್ಲ. ಒಂದು ರೀತಿಯಲ್ಲಿ ನಾನು ಇದನ್ನು ಒಪ್ಪುತ್ತೇನೆ. ಏಕೆಂದರೆ ಬಹಳಷ್ಟು ಆಟಗಾರರು ಈ ಹಿಂದೆ ಹಾಗೆ ಮಾಡಿದ್ದಾರೆ. ನಂತರ ಮತ್ತೆ ಬಂದು ಉತ್ತಮ ಆರ್ಥಿಕ ಪ್ಯಾಕೇಜ್ ಪಡೆದಿದ್ದಾರೆ. ಅದೇ ಸಮಯದಲ್ಲಿ ಬಹಳಷ್ಟು ವಿಷಯಗಳು ಗೊಂದಲವಾಗುತ್ತದೆ’’ ಎಂದು ಬಿಯರ್ಡ್ ಬಿಫೋರ್ ಕ್ರಿಕೆಟ್ ಪಾಡ್ಕ್ಯಾಸ್ಟ್ನಲ್ಲಿ ಮೊಯಿನ್ ಅಲಿ ಹೇಳಿದ್ದಾರೆ.
ತಮ್ಮ ತಂಡದ ಆಟಗಾರನ ದೃಷ್ಟಿಕೋನವನ್ನು ಬೆಂಬಲಿಸಿದ ಇಂಗ್ಲೆಂಡ್ ಲೆಗ್ ಸ್ಪಿನ್ನರ್ ರಶೀದ್, ‘‘ಬಿಸಿಸಿಐ ಆ ನಿಯಮವನ್ನು ಮೊದಲೇ ಜಾರಿಗೆ ತಂದಿತ್ತು. ನಿಯಮ ಜಾರಿಗೆ ಬಂದ ನಂತರವೂ ಇದು ನಡೆದಿದೆ. ಹರಾಜಿನಲ್ಲಿ ಭಾಗವಹಿಸುವಾಗ ಬ್ರೂಕ್ ಗೆ ನಿಯಮದ ಅರಿವಿತ್ತು. ಪರಿಣಾಮಗಳು ಅವರಿಗೆ ಗೊತ್ತಿತ್ತು. ಆದ್ದರಿಂದ ಇದು ಕಠಿಣ ಎಂದು ನಾನು ಭಾವಿಸುವುದಿಲ್ಲ’’ ಎಂದರು.