ಭಾರತದ ಟೆಸ್ಟ್ ಕ್ರಿಕೆಟ್ ಪ್ರವಾಸದಿಂದ ಹಿಂದೆ ಸರಿದ ಹ್ಯಾರಿ ಬ್ರೂಕ್

Photo : thecricketer.com
ಹೊಸದಿಲ್ಲಿ: ವೈಯಕ್ತಿಕ ಕಾರಣಗಳಿಂದಾಗಿ ಭಾರತಕ್ಕೆ ಟೆಸ್ಟ್ ಸರಣಿಯನ್ನಾಡಲು ತೆರಳುತ್ತಿರುವ ಇಂಗ್ಲೆಂಡ್ ಕ್ರಿಕೆಟ್ ತಂಡದಿಂದ ಹ್ಯಾರಿ ಬ್ರೂಕ್ ಹಿಂದೆ ಸರಿದಿದ್ದಾರೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ರವಿವಾರ ತಿಳಿಸಿದೆ.
ಬಲಗೈ ಬ್ಯಾಟರ್ ಬದಲಿಗೆ ಶೀಘ್ರವೇ ಬದಲಿ ಆಟಗಾರರನ್ನು ನೇಮಿಸಲಾಗುವುದು. ಈ ಸಮಯದಲ್ಲಿ ಖಾಸಗಿತನಕ್ಕೆ ಗೌರವ ನೀಡಬೇಕೆಂದು ಬ್ರೂಕ್ ಕುಟುಂಬ ವಿನಂತಿಸಿದೆ. ಈ ಹಿನ್ನೆಲೆಯಲ್ಲಿ ಅವರ ಖಾಸಗಿತನವನ್ನು ಗೌರವಿಸಬೇಕು ಎಂದು ಮಾಧ್ಯಮ ಹಾಗೂ ಸಾರ್ವಜನಿಕರಿಗೆ ಇಸಿಬಿ ಹಾಗೂ ಬ್ರೂಕ್ ಕುಟುಂಬ ವಿನಂತಿಸುತ್ತಿದೆ ಎಂದು ಇಸಿಬಿ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಸರಣಿಗಿಂತ ಮೊದಲು ಪೂರ್ವತಯಾರಿ ಶಿಬಿರಕ್ಕಾಗಿ ಅಬುಧಾಬಿಗೆ ತೆರಳಿರುವ ಇಂಗ್ಲೆಂಡ್ ತಂಡದೊಂದಿಗೆ ಬ್ರೂಕ್ ಪ್ರಯಾಣಿಸಿದ್ದರು.
ಬ್ರೂಕ್ 2022ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಕ್ರಿಕೆಟಿಗೆ ಕಾಲಿಟ್ಟಿದ್ದರು. 2023ರ ಜುಲೈನಲ್ಲಿ ʼದಿ ಓವಲ್ʼ ನಲ್ಲಿ ಆಸ್ಟ್ರೇಲಿಯ ವಿರುದ್ಧ ಇಂಗ್ಲೆಂಡ್ ಪರ ಕೊನೆಯ ಬಾರಿ ಟೆಸ್ಟ್ ಪಂದ್ಯವನ್ನು ಆಡಿದ್ದರು.
24ರ ಹರೆಯದ ಬ್ರೂಕ್ ಈ ತನಕ ಇಂಗ್ಲೆಂಡ್ ಪರ 12 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 4 ಶತಕ ಹಾಗೂ 7 ಅರ್ಧಶತಕಗಳ ಸಹಿತ 1,181 ರನ್ ಗಳಿಸಿದ್ದಾರೆ. ಬ್ರೂಕ್ ಶ್ರೇಷ್ಠ ಪ್ರದರ್ಶನದ ನೆರವಿನಿಂದ 2022ರಲ್ಲಿ ಪಾಕಿಸ್ತಾನದ ವಿರುದ್ಧ ಇಂಗ್ಲೆಂಡ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿತ್ತು. 5 ಇನಿಂಗ್ಸ್ ಗಳಲ್ಲಿ 93.60ರ ಸರಾಸರಿಯಲ್ಲಿ ಒಟ್ಟು 468 ರನ್ ಗಳಿಸಿದ ಬ್ರೂಕ್ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.
ಭಾರತ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯು ಗುರುವಾರದಿಂದ ಹೈದರಾಬಾದ್ನಲ್ಲಿ ಆರಂಭವಾಗಲಿದೆ.