ನದೀಮ್ ರ ಒಲಿಂಪಿಕ್ ದಾಖಲೆಯನ್ನು ಮುರಿಯುವ ವಿಶ್ವಾಸವಿತ್ತು : ನೀರಜ್ ಚೋಪ್ರಾ
ನದೀಮ್ , ನೀರಜ್ ಚೋಪ್ರಾ | PC : PTI
ಹೊಸದಿಲ್ಲಿ : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅರ್ಶದ್ ನದೀಮ್ ರನ್ನು ಸೋಲಿಸುವ ಬಗ್ಗೆ ನನಗೆ ಸಂಪೂರ್ಣ ಭರವಸೆಯಿತ್ತು ಎಂದು ಭಾರತದ ತಾರಾ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಶನಿವಾರ ಹೇಳಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಒಲಿಂಪಿಕ್ಸ್ ನಲ್ಲಿ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ನದೀಮ್ 92.97 ಮೀಟರ್ ದೂರ ಈಟಿ ಎಸೆದು ಒಲಿಂಪಿಕ್ ದಾಖಲೆಯೊಂದಿಗೆ ಚಿನ್ನ ಗೆದ್ದರೆ, 89.45 ಮೀಟರ್ ದೂರ ಈಟಿ ಎಸೆದ ನೀರಜ್ ಬೆಳ್ಳಿಗೆ ತೃಪ್ತಿ ಪಟ್ಟರು. ನೀರಜ್ ಮೂರು ವರ್ಷಗಳ ಹಿಂದೆ ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ 87.58 ಮೀಟರ್ ದೂರ ಈಟಿ ಎಸೆದು ಚಿನ್ನ ಸಂಪಾದಿಸಿದ್ದರು.
‘‘ನಾನು ನದೀಮ್ ರ ಒಲಿಂಪಿಕ್ ದಾಖಲೆಯನ್ನು ಮುರಿಯಬಹುದಾಗಿತ್ತು. ಆದರೆ, ಯಾಕೋ ನನ್ನ ದೇಹ ಅದಕ್ಕೆ ಸ್ಪಂದಿಸಲಿಲ್ಲ’’ ಎಂದು ಅವರು ಹೇಳಿದರು.
ಅರ್ಹತಾ ಸುತ್ತಿನಲ್ಲಿ 89.34 ಮೀಟರ್ ದೂರ ಈಟಿ ಎಸೆದು ಚಿನ್ನ ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿ ನೀರಜ್ ಫೈನಲ್ ತಲುಪಿದ್ದರು. ಫೈನಲ್ ನಲ್ಲಿ ಎರಡನೇ ಪ್ರಯತ್ನದಲ್ಲಿ ಇದನ್ನು ಮೀರಿ 89.45 ಮೀಟರ್ ದೂರ ಈಟಿ ಎಸೆದರಾದರೂ, ಚಿನ್ನ ಮರೀಚಿಕೆಯಾಯಿತು.
‘‘ನದೀಮ್ ತುಂಬಾ ಕಠಿಣ ಪರಿಶ್ರಮಿ ಕ್ರೀಡಾಪಟು. ಅವರ ವಿರುದ್ಧ ಸ್ಪರ್ಧಿಸುವುದು ಯಾವಾಗಲು ಚೇತೋಹಾರಿ ಅನುಭವ. ಆ ದಿನವೂ, ನಾವು ಉತ್ತಮ ಸ್ಪರ್ಧೆಯನ್ನು ನೀಡುತ್ತೇವೆ ಎಂಬ ಬಗ್ಗೆ ನನಗೆ ಭರವಸೆಯಿತ್ತು’’ ಎಂದು ಐ ಎ ಎನ್ ಎಸ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದರು.
‘‘ಅವರು ತನ್ನ ಎರಡನೇ ಎಸೆತದಲ್ಲಿ ಒಲಿಂಪಿಕ್ ದಾಖಲೆ ನಿರ್ಮಿಸಿದ ಬಳಿಕ, ಅದು ಪ್ರತಿಯೊಬ್ಬರಲ್ಲೂ ಒತ್ತಡ ಸೃಷ್ಟಿಸಿತು. ಆದರೆ, ನಾನು ಅವರ ವಿರುದ್ಧ ಹಿಂದೆಯೂ ಸ್ಪರ್ಧಿಸಿರುವುದರಿಂದ, ನನ್ನ ಎರಡನೇ ಪ್ರಯತ್ನದ ಬಳಿಕ ಅವರ ದಾಖಲೆಯನ್ನು ಮುರಿಯುವ ವಿಶ್ವಾಸ ನನ್ನಲ್ಲಿತ್ತು. ನನ್ನ ಎರಡನೇ ಪ್ರಯತ್ನವು 90 ಮೀಟರ್ಗೆ ನಿಕಟವಾಗಿತ್ತು. ಆದರೆ, ಯಾಕೋ ನನ್ನ ದೇಹ ಸ್ಪಂದಿಸಲಿಲ್ಲ’’ ಎಂದು ಅವರು ಹೇಳಿದರು.
‘‘ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳುವುದು, ಅದರಲ್ಲೂ ಪದಕವನ್ನು ಉಳಿಸಿಕೊಳ್ಳುವುದು ಸುಲಭವಲ್ಲ. ದೇಶಕ್ಕಾಗಿ ಬೆಳ್ಳಿ ಗೆದ್ದ ಸಂತೃಪ್ತಿ ನನಗಿದೆ. ಆದರೆ, ಚೇತರಿಸಿಕೊಳ್ಳಲು ಮಾಡಬೇಕಾದ ಕೆಲಸಗಳ ಬಗ್ಗೆ ನಾನು ಮುಂದೆ ಗಮನಹರಿಸುತ್ತೇನೆ’’ ಎಂದು ನೀರಜ್ ಚೋಪ್ರಾ ಹೇಳಿದರು.
ಮುಂದೆ ನೀವು ಯಾವ ಸ್ಪರ್ಧೆಯಲ್ಲಿ ಭಾಗವಹಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘‘ಸ್ವಿಟ್ಸರ್ ಲ್ಯಾಂಡ್ನಲ್ಲಿ ನಡೆಯುವ ಲೌಸಾನ್ ಡೈಮಂಡ್ ಲೀಗ್ನಲ್ಲಿ ಪಾಲ್ಗೊಳ್ಳಲು ನಾನು ಅಂತಿಮವಾಗಿ ನಿರ್ಧರಿಸಿದ್ದೇನೆ’’ ಎಂದು ಹೇಳಿದರು.
ಈ ಪಂದ್ಯಾವಳಿಯು ಆಗಸ್ಟ್ 22ರಂದು ಆರಂಭಗೊಳ್ಳಲಿದೆ. ನೀರಜ್ ಚೋಪ್ರಾ ಈಗ ಸ್ವಿಟ್ಸರ್ಲ್ಯಾಂಡ್ನಲ್ಲಿ ತನ್ನ ಕೋಚ್ ಕ್ಲಾಸ್ ಬರ್ಟೊನೇಟ್ಸ್ ಮತ್ತು ಫಿಸಿಯೊ ಇಶಾನ್ ಮರ್ವಾಹ ಜೊತೆಗೆ ತರಬೇತಿ ಪಡೆಯುತ್ತಿದ್ದಾರೆ.