ಪಾಕಿಸ್ತಾನದ ರಾಜಧಾನಿಯಲ್ಲಿರುವ ಭಾರತೀಯ ಡೇವಿಸ್ ಕಪ್ ತಂಡಕ್ಕೆ ದೇಶದ ಮುಖ್ಯಸ್ಥರ ದರ್ಜೆಯ ಭದ್ರತೆ
Photo: NDTV
ಇಸ್ಲಮಾಬಾದ್: ಪಾಕಿಸ್ತಾನ ರಾಜಧಾನಿ ಇಸ್ಲಮಾಬಾದ್ ಗೆ ಆಗಮಿಸಿರುವ ಭಾರತೀಯ ಟೆನಿಸ್ ತಂಡಕ್ಕೆ ಉನ್ನತ ದರ್ಜೆಯ ಭದ್ರತೆ ಒದಗಿಸಲಾಗಿದ್ದು, ಪ್ರತಿ ದಿನ ಬೆಳಗ್ಗೆ ಬಾಂಬ್ ನಿಷ್ಕ್ರಿಯ ದಳವು ಇಸ್ಲಮಾಬಾದ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಶೋಧ ನಡೆಸಲಿದೆ ಹಾಗೂ ಭಾರತೀಯ ಡೇವಿಸ್ ಕಪ್ ತಂಡವು ಪ್ರಯಾಣಿಸುವಾಗ ಎರಡು ಬೆಂಗಾವಲು ವಾಹನಗಳೊಂದಿಗೆ ಬಹು ಹಂತದ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಭದ್ರತಾ ವ್ಯವಸ್ಥೆಯನ್ನು ಸಾಮಾನ್ಯವಾಗಿ ದೇಶದ ಮುಖ್ಯಸ್ಥರಿಗೆ ಒದಗಿಸಲಾಗುತ್ತದೆ ಎಂದು ವರದಿಯಾಗಿದೆ.
ಕಳೆದ 60 ವರ್ಷಗಳಲ್ಲಿ ಭಾರತೀಯ ಟೆನಿಸ್ ತಂಡವು ಇದೇ ಪ್ರಥಮ ಬಾರಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದು, ಸಹಜವಾಗಿಯೇ ಪಾಕಿಸ್ತಾನ ಟೆನಿಸ್ ಫೆಡರೇಷನ್ ಗೆ ಭದ್ರತಾ ವಿಷಯಗಳಲ್ಲಿ ರಾಜಿ ಮಾಡಿಕೊಳ್ಳುವ ಇರಾದೆಯಿಲ್ಲ ಎಂದು ಹೇಳಲಾಗಿದೆ.
ಭಾರತೀಯ ಆಟಗಾರರು ಬಹುತೇಕ ಆಟದ ಮೈದಾನ ಹಾಗೂ ಹೋಟೆಲ್ ಪ್ರಯಾಣಕ್ಕೆ ಮಾತ್ರ ಸೀಮಿತವಾಗಲಿದ್ದು, ಇದು ಬಹಳ ಕಠಿಣವಾದರೂ, ಸುರಕ್ಷಿತ ಭದ್ರತೆ ಎಂದು ವ್ಯಾಖ್ಯಾನಿಸಲಾಗಿದೆ. ಅಂತಾರಾಷ್ಟ್ರೀಯ ಟೆನಿಸ್ ಒಕ್ಕೂಟವು ಅನುಮೋದನೆ ನೀಡಿರುವ ಭದ್ರತಾ ಯೋಜನೆಯನ್ನು ಪಾಕಿಸ್ತಾನ ಟೆನಿಸ್ ಫೆಡರೇಷನ್ ಅನುಸರಿಸುತ್ತಿದೆ.
ಈ ಕುರಿತು PTI ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಟೆನಿಸ್ ಫೆಡರೇಷನ್ ನ ಪ್ರಧಾನ ಕಾರ್ಯದರ್ಶಿ ಕರ್ನಲ್ ಗುಲ್ ರೆಹಮಾನ್, “ಭಾರತೀಯ ತಂಡವು 60 ವರ್ಷಗಳ ನಂತರ ಪಾಕಿಸ್ತಾನಕ್ಕೆ ಭೇಟಿ ನೀಡಿರುವುದರಿಂದ, ನಾವು ಹೆಚ್ಚಿನ ಮುಂಜಾಗ್ರತೆಯನ್ನು ತೆಗೆದುಕೊಂಡಿದ್ದೇವೆ. ಭಾರತೀಯ ತಂಡದ ಸುತ್ತ ನಾಲ್ಕರಿಂದ ಐದು ಹಂತದ ಭದ್ರತಾ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ. ಭದ್ರತಾ ವ್ಯವಸ್ಥಾಪಕನಾಗಿ ನಾನು ಪ್ರಯಾಣದ ಸಂದರ್ಭದಲ್ಲಿ ಭಾರತೀಯ ತಂಡದೊಂದಿಗಿರುತ್ತೇನೆ” ಎಂದು ಹೇಳಿದ್ದಾರೆ.
ಭಾರತೀಯ ತಂಡದಲ್ಲಿ ಐವರು ಆಟಗಾರರು, ಇಬ್ಬರು ಭೌತಚಿಕಿತ್ಸಕರು ಹಾಗೂ ಇಬ್ಬರು ಎಐಟಿಎ ಅಧಿಕಾರಿಗಳಿದ್ದು, ಅವರೆಲ್ಲ ರವಿವಾರ ರಾತ್ರಿ ಇಸ್ಲಮಾಬಾದ್ ಗೆ ಆಗಮಿಸಿದರು.