ಸೋಲುವುದು ಸರಿ, ಆದರೆ ಸ್ಪರ್ಧೆಯನ್ನಾದರೂ ನೀಡಿ: ಪಾಕ್ ಕ್ರಿಕೆಟ್ ತಂಡಕ್ಕೆ ರಮೀಝ್ ರಾಜ ಕರೆ
Photo : twitter
ಇಸ್ಲಾಮಾಬಾದ್, ಅ. 15: ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಶನಿವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ಕಳಪೆ ನಿರ್ವಹಣೆಗೆ ತಂಡದ ಮಾಜಿ ನಾಯಕ ರಮೀಝ್ ರಾಜ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಈ ಸೋಲು ‘‘ನೋವು ಮತ್ತು ಆರದ ಗಾಯ ಉಂಟು ಮಾಡಿದೆ’’ ಎಂದು ಅವರು ಬಣ್ಣಿಸಿದ್ದಾರೆ.
‘‘ಈ ಸೋಲು ಅವರನ್ನು ಕಾಡುತ್ತದೆ. ಇದು ಆರದ ಗಾಯದಂತಾಗಿದೆ. ಕ್ರೀಡೆಯ ಎಲ್ಲಾ ಮೂರು ವಿಭಾಗಗಳಲ್ಲಿ ಅವರು ಹಿನ್ನಡೆ ಅನುಭವಿಸಿರುವುದು ಆಘಾತ ತಂದಿದೆ’’ ಎಂದು ಐಸಿಸಿ ರಿವ್ಯೆ ಪಾಡ್ಕಾಸ್ಟ್ನಲ್ಲಿ ರಾಜ ಹೇಳಿದ್ದಾರೆ.
‘‘ನಿಮಗೆ ಗೆಲ್ಲಲು ಸಾಧ್ಯವಾಗದಿರಬಹುದು, ಕೊನೆಯ ಪಕ್ಷ ಸ್ಪರ್ಧಿಸಿ. ಪಾಕಿಸ್ತಾನಕ್ಕೆ ಅಷ್ಟನ್ನೂ ಮಾಡಲು ಸಾಧ್ಯವಾಗಲಿಲ್ಲ’’ ಎಂದು ಅವರು ಹೇಳಿದ್ದಾರೆ.
ಈವರೆಗೆ ಭಾರತದ ವಿರುದ್ಧ ಆಡಿರುವ ಎಲ್ಲಾ 8 ವಿಶ್ವಕಪ್ ಪಂದ್ಯಗಳಲ್ಲಿ ಪಾಕಿಸ್ತಾನ ಸೋಲನುಭವಿಸಿದೆ.
‘‘ಇದು ವಾಸ್ತವ. ಈ ಬಗ್ಗೆ ಪಾಕಿಸ್ತಾನ ಏನಾದರೂ ಮಾಡಬೇಕಾಗಿದೆ. ಅವರು ಭಾರತದ ವಿರುದ್ಧ ಆಡುವಾಗ ‘ಏದುಸಿರು ಬಿಡುತ್ತಾರೆ’ ಎಂದು ಹೇಳಬಹುದು. ಇದೊಂದು ಮಾನಸಿಕ ತಡೆ, ಕೌಶಲ ತಡೆಯೂ ಹೌದು’’ ಎಂದು 1992ರ ವಿಶ್ವಕಪ್ ಗೆದ್ದ ಪಾಕಿಸ್ತಾನ ತಂಡದ ಸದಸ್ಯ ರಾಜ ಹೇಳಿದರು.
ಭಾರತದ ವಿರುದ್ಧದ ಪಂದ್ಯಗಳಲ್ಲಿ ಪಾಕಿಸ್ತಾನಿ ಆಟಗಾರರು ಅಗಾಧ ಒತ್ತಡಕ್ಕೆ ಒಳಗಾಗುತ್ತಾರೆ ಎನ್ನುವುದನ್ನು 61 ವರ್ಷದ ರಮೀಝ್ ರಾಜ ಒಪ್ಪಿಕೊಂಡರು. ಆದರೆ, ಅವರು ಅದನ್ನು ಮೀರಿ ನಿಲ್ಲಬೇಕಾಗಿದೆ ಎಂದರು.
‘‘ಭಾರತದ ವಿರುದ್ಧ ಆಡುವಾಗ ಇಂಥ ಪರಿಸರ ಇರುತ್ತದೆ. 99 ಶೇಕಡಾ ಭಾರತೀಯ ಅಭಿಮಾನಿಗಳು ಮತ್ತು ಪ್ರೇಕ್ಷಕರು. ಆಗ ಆಟಗಾರರು ಒತ್ತಡಕ್ಕೊಳಗಾಗುತ್ತಾರೆ. ಇದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ’’ ಎಂದು ಅವರು ಹೇಳಿದರು.
‘‘ಆದರೆ, ಈ ತಂಡದ ನೇತೃತ್ವವನ್ನು ಬಾಬರ್ ಆಝಮ್ ನಾಲ್ಕೈದು ವರ್ಷಗಳ ಕಾಲ ವಹಿಸಿದ್ದಾರೆ. ಹಾಗಾಗಿ, ಅವರು ಇದನ್ನೆಲ್ಲ ನಿಭಾಯಿಸಲು ಕಲಿಯಬೇಕು’’ ಎಂದರು.
ಇಂಥ ಮಹತ್ವದ ಪಂದ್ಯಗಳಲ್ಲಿ ಒತ್ತಡವನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ಭಾರತವನ್ನು ನೋಡಿ ಕಲಿಯಿರಿ ಎಂದು ಅವರು ಪಾಕ್ ಆಟಗಾರರಿಗೆ ಕಿವಿಮಾತು ಹೇಳಿದರು.
‘‘ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯಗಳಲ್ಲಿ ಭಾರತವು ತನ್ನ ಉಪಸ್ಥಿತಿಯನ್ನು ಪ್ರದರ್ಶಿಸುತ್ತದೆ. ಅದಕ್ಕಾಗಿ ಭಾರತವನ್ನು ಅಭಿನಂದಿಸಬೇಕು. ಆ ಪಂದ್ಯದಲ್ಲಿ ಭಾವನೆಗಳು ಸಮ್ಮಿಳಿತವಾಗಿದ್ದವು. ಹಾಗಾಗಿ, ಅದು ಭಾರತಕ್ಕೂ ಸುಲಭವಾಗಿರಲಿಲ್ಲ’’ ಎಂದು ಅವರು ಅಭಿಪ್ರಾಯಪಟ್ಟರು.