ಶುಭ ಕೋರಲು ಪ್ರಯತ್ನಿಸಿದರೆ ನನ್ನ ಕರೆ ಸ್ವೀಕರಿಸಲಿಲ್ಲ: ಅಶ್ವಿನ್ ವಿರುದ್ಧ ಲಕ್ಷ್ಮಣ್ ಶಿವರಾಮಕೃಷ್ಣನ್ ಆಕ್ರೋಶ
ಆರ್.ಅಶ್ವಿನ್ | Photo: PTI
ಹೊಸದಿಲ್ಲಿ : ಹಿರಿಯರಿಗೆ ಗೌರವ ನೀಡದ ಭಾರತದ ಆಫ್ ಸ್ಪಿನ್ನರ್ ಆರ್.ಅಶ್ವಿನ್ ವರ್ತನೆಗೆ ಭಾರತದ ಮಾಜಿ ಸ್ಪಿನ್ನರ್ ಲಕ್ಷ್ಮಣ್ ಶಿವರಾಮಕೃಷ್ಣನ್ ಬೇಸರ ವ್ಯಕ್ತಪಡಿಸಿದ್ದಾರೆ.
1983 ಹಾಗೂ 1987ರ ನಡುವೆ ಭಾರತದ ಪರ 9 ಟೆಸ್ಟ್ ಹಾಗೂ 16 ಏಕದಿನ ಪಂದ್ಯಗಳನ್ನಾಡಿರುವ ಶಿವರಾಮಕೃಷ್ಣನ್, ಎಕ್ಸ್ ನಲ್ಲಿ ಈ ಕುರಿತು, “100ನೇ ಟೆಸ್ಟ್ ಪಂದ್ಯ ಆಡುತ್ತಿರುವ ಆರ್.ಅಶ್ವಿನ್ ಗೆ ಶುಭ ಕೋರಲು ನಾನು ಕೆಲವು ಬಾರಿ ಕರೆ ಮಾಡಲು ಯತ್ನಿಸಿದ್ದೆ. ಆಗ ಅಶ್ವಿನ್ ನನ್ನ ಕರೆ ಕಟ್ ಮಾಡಿದರು. ನೋ ರಿಪ್ಲೇ ಎಂಬ ಸಂದೇಶವನ್ನು ನನಗೆ ಕಳುಹಿಸಿದರು. ಇದು ನಮ್ಮಂತಹ ಮಾಜಿ ಕ್ರಿಕೆಟಿಗರು ಪಡೆಯುತ್ತಿರುವ ಗೌರವ” ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ.
ಭಾರತದ ಪ್ರಮುಖ ಸ್ಪಿನ್ನರ್ ಅಶ್ವಿನ್ ಇಂಗ್ಲೆಂಡ್ ವಿರುದ್ಧ ಧರ್ಮಶಾಲಾದಲ್ಲಿ ಮಾ.7 ರಿಂದ ಆರಂವಾಗಲಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ 100ನೇ ಟೆಸ್ಟ್ ಮೈಲಿಗಲ್ಲು ತಲುಪಲು ಎದುರು ನೋಡುತ್ತಿದ್ದಾರೆ. ಅಶ್ವಿನ್ ಇತ್ತೀಚೆಗೆ ರಾಜ್ಕೋಟ್ ನಲ್ಲಿ ನಡೆದ 3ನೇ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಅನಿಲ್ ಕುಂಬ್ಳೆ ನಂತರ 500 ವಿಕೆಟ್ ಪಡೆದ ಭಾರತದ ಎರಡನೇ ಬೌಲರ್ ಎಂಬ ಹಿರಿಮೆಗೆ ಪಾತ್ರರಾಗಿದ್ದರು. ಇದೀಗ 35ನೇ ಬಾರಿ ಐದು ವಿಕೆಟ್ ಗೊಂಚಲು ಕಬಳಿಸಿ ಕುಂಬ್ಳೆ ಅವರ ದಾಖಲೆಯನ್ನು ಮುರಿಯುವತ್ತ ಚಿತ್ತಹರಿಸಿದ್ದಾರೆ.
ಅಶ್ವಿನ್ ಸದ್ಯ ಟೆಸ್ಟ್ ಕ್ರಿಕೆಟ್ ನಲ್ಲಿ 35 ಬಾರಿ ಐದು ವಿಕೆಟ್ ಗೊಂಚಲು ಕಬಳಿಸಿದ್ದಾರೆ. ಧರ್ಮಶಾಲಾದಲ್ಲಿ ಇನ್ನೊಮ್ಮೆ ಐದು ವಿಕೆಟ್ ಕಬಳಿಸಿದರೆ ಕುಂಬ್ಳೆ ದಾಖಲೆಯನ್ನು ಮುರಿಯಬಹುದು.
ಟೆಸ್ಟ್ ಕ್ರಿಕೆಟ್ ನಲ್ಲಿ ಮುತ್ತಯ್ಯ ಮುರಳೀಧರನ್(67), ಶೇನ್ ವಾರ್ನ್(37) ಹಾಗೂ ರಿಚರ್ಡ್ ಹ್ಯಾಡ್ಲಿ(36)ಅತ್ಯಂತ ಹೆಚ್ಚು ಬಾರಿ ಐದು ವಿಕೆಟ್ ಗೊಂಚಲನ್ನು ಕಬಳಿಸಿದ್ದಾರೆ.
ನೀವೇ ಅಶ್ವಿನ್ಗೆ ಅಗೌರವ ತೋರಿದ್ದೀರಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತಿಯೊಬ್ಬರು ಆರೋಪಿಸಿದ್ದಕ್ಕೆ ಸ್ಪಷ್ಟನೆ ನೀಡಿದ ಶಿವರಾಮಕೃಷ್ಣನ್, ಇದು ತಾಂತ್ರಿಕತೆಗೆ ಸಂಬಂಧಿಸಿದ ಸಲಹೆಯಾಗಿದೆ. ಇದು ಟೀಕೆಯೂ ಅಲ್ಲ. ಅಗೌರವವೂ ಅಲ್ಲ. ಇದರಲ್ಲಿ ಉತ್ತಮ ಉದ್ದೇಶವಿದೆ. ಸಲಹೆಗಳನ್ನು ನೀಡುವುದು ಅವಮಾನ ಅಥವಾ ಅಪರಾಧ ಎಂದು ನೀವು ಭಾವಿಸಿದರೆ ದೇವರೇ ನಿಮ್ಮನ್ನು ಕ್ಷಮಿಸಲಿ. ನಾನು 43 ವರ್ಷಗಳಿಂದ ಕ್ರಿಕೆಟ್ ಜೊತೆಗಿದ್ದೇನೆ. ಹಾಗಾಗಿ ನನಗೆ ಆಟದ ಬಗ್ಗೆ ಸ್ವಲ್ಪ ಜ್ಞಾನವಿದೆ ಎಂದು ಎಕ್ಸ್ನಲ್ಲಿ ಬರೆದಿದ್ದಾರೆ.