ಕಳೆದೊಂದು ದಶಕದಿಂದ ನಾನು ಧೋನಿಯ ಜೊತೆ ಮಾತನಾಡುತ್ತಿಲ್ಲ: ಹರ್ಭಜನ್ ಸಿಂಗ್
ಮಹೇಂದ್ರ ಸಿಂಗ್ ಧೋನಿ ಹಾಗೂ ಸ್ಪಿನ್ನರ್ ಹರ್ಭಜನ್ ಸಿಂಗ್ (File Photo: BCCI)
ಹೊಸದಿಲ್ಲಿ: ಕಳೆದೊಂದು ದಶಕದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಕೇವಲ ಒಂದು ಬಾರಿ ಬಿಟ್ಟರೆ, ಪರಸ್ಪರರು, ಬೇರೆ ಯಾವತ್ತೂ ಮಾತನಾಡಿಲ್ಲ. ಈ ಬಗ್ಗೆ ಸ್ವತಃ ಹರ್ಭಜನ್ ಸಿಂಗ್ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಐಪಿಎಲ್ ಕ್ರೀಡಾಕೂಟದಲ್ಲಿ ಸಿಎಸ್ ಕೆ ತಂಡಕ್ಕಾಗಿ ಆಡುತ್ತಿರುವಾಗ ಮೈದಾನದಲ್ಲಿ ಒಂದು ಬಾರಿ ಮಾತನಾಡಿದ್ದು ಬಿಟ್ಟರೆ, ಇನ್ಯಾವತ್ತೂ ನಾನು ಧೋನಿ ಜೊತೆ ಮಾತನಾಡಿಲ್ಲ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.
ನಾನು ಧೋನಿಯೊಂದಿಗೆ ಮಾತನಾಡಿಲ್ಲ. ಸಿಎಸ್ ಕೆಯಲ್ಲಿ ಆಟವಾಡುತ್ತಿದ್ದಾಗ ಮಾತನಾಡಿದ್ದೆವು, ಅದನ್ನು ಬಿಟ್ಟರೆ, ನಮ್ಮ ಮಾತುಕತೆಯಾಗಿಲ್ಲ. 10 ವರ್ಷಗಳಿಂದ ನಾವು ಮಾತನಾಡಿಲ್ಲ. ಮಾತನಾಡದಿರಲು ನನಗೆ ಯಾವುದೇ ಕಾರಣಗಳಿಲ್ಲ, ಬಹುಶ ಅವರಿಗೆ ಇರಬೇಕು. ಐಪಿಎಲ್ ಸಮಯದಲ್ಲಿ ಮಾತನಾಡಿದ್ದೆವು, ಅದೂ ಮೈದಾನಕ್ಕೆ ಸೀಮಿತವಾಗಿತ್ತು. ಅದರ ಬಳಿಕ ಅವರೂ ನನ್ನ ರೂಮಿಗೆ ಬಂದಿಲ್ಲ. ನಾನೂ ಅವರ ರೂಮಿಗೆ ಹೋಗಿಲ್ಲ ಎಂದು ಹರ್ಭಜನ್ ಸಿಂಗ್ ಅವರು News18 ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ನನಗೆ ಅವರೊಂದಿಗೆ ಯಾವುದೇ ವಿರೋಧವಿಲ್ಲ. ಅವರಿಗೂ ಇದ್ದಿದ್ದರೆ, ಇಷ್ಟೊತ್ತಿಗೆ ಹೇಳುತ್ತಿದ್ದರು. ನನ್ನ ಕರೆಯನ್ನು ಉತ್ತರಿಸುವವರಿಗೆ ಮಾತ್ರ ನಾನು ಕರೆ ಮಾಡುತ್ತೇನೆ, ಇಲ್ಲದಿದ್ದರೆ ನನಗೂ ಸಮಯವಿರುವುದಿಲ್ಲ. ಸಂಬಂಧಗಳು ಯಾವತ್ತೂ ಕೊಡು, ಕೊಳ್ಳುವಿಕೆಯದ್ದು ಆಗಿರಬೇಕು. ಒಂದೆರಡು ಬಾರಿ ನನ್ನ ಕರೆಗೆ ಉತ್ತರಿಸದಿದ್ದರೆ, ನಂತರ ನನಗೆ ಎಷ್ಟು ಬೇಕೋ ಅಷ್ಟು ಮಾತ್ರ ನಾನು ಭೇಟಿಯಾಗುತ್ತೇನೆ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.
2007, 2011 ರಲ್ಲಿ ವಿಶ್ವಕಪ್ ಗೆಲ್ಲುವಾಗ ಒಂದೇ ತಂಡದಲ್ಲಿ ಆಡಿದ್ದ ಇಬ್ಬರು ಆಟಗಾರರು, 2015 ರಲ್ಲಿ ಸೌತ್ ಆಫ್ರಿಕಾದ ವಿರುದ್ಧದ ಏಕಡಿನ ಪಂದ್ಯಕ್ಕಾಗಿ ಭಾರತವನ್ನು ಕಡೆಯ ಬಾರಿ ಒಟ್ಟಿಗೆ ಪ್ರತಿನಿಧಿಸಿದ್ದರು, ಅದಾದ ಬಳಿಕ, ಐಪಿಎಲ್ ನ ಕೆಲವು ಸೀಸನ್ ಗಳಲ್ಲಿ ಸಿಎಸ್ ಕೆ ಗಾಗಿ ಒಟ್ಟಿಗೆ ಆಡಿದ್ದರು.