ರಿಷಭ್ ಪಂತ್ ಆಸ್ಟ್ರೇಲಿಯನ್ ಆಗಬೇಕು ಎನ್ನುವುದು ನನ್ನ ಬಯಕೆ: ಮಿಚೆಲ್ ಮಾರ್ಷ್
ರಿಷಭ್ ಪಂತ್ PC: x.com/suyogwarke_
ಹೊಸದಿಲ್ಲಿ: ಇತ್ತೀಚೆಗೆ ಅತಿಹೆಚ್ಚು ಜನಪ್ರಿಯತೆ ಪಡೆಯುತ್ತಿರುವ ಉದಯೋನ್ಮುಖ ಆಟಗಾರರ ಪೈಕಿ ರಿಷಭ್ ಪಂತ್ ಹೆಸರು ಮುಂಚೂಣಿಯಲ್ಲಿದೆ. 2022ರ ಡಿಸೆಂಬರ್ ನಲ್ಲಿ ನಡೆದ ಭೀಕರ ಅಪಘಾತದ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ಅಲ್ಪವಿರಾಮ ಪಡೆದಿದ್ದ ಪಂತ್ ಇದೀಗ ಭರ್ಜರಿ ಪ್ರದರ್ಶನದ ಮೂಲಕ ಮುನ್ನೆಲೆಗೆ ಬಂದಿದ್ದಾರೆ.
ಒಂದು ವರ್ಷ ಕಾಲದ ಪುನಶ್ಚೇತನ ಅವಧಿಯ ಬಳಿಕ ಭಾರತದ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ಪಂತ್ ಈ ವರ್ಷದ ಆರಂಭದಲ್ಲಿ ಐಪಿಎಲ್ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್ ಗೆ ಮರಳಿದ್ದರು. ಭಾರತ ಟಿ20 ವಿಶ್ವಕಪ್ ಜಯಿಸುವಲ್ಲಿ ಕೂಡಾ ಇವರ ಕೊಡುಗೆ ಮಹತ್ವದ್ದಾಗಿತ್ತು. ಕಳೆದ ವಾರ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಶತಕದೊಂದಿಗೆ ಕೆಂಪು ಚೆಂಡಿನ ವರ್ಗದಲ್ಲಿ ಕೂಡಾ ತಮ್ಮ ಪುನರಾಗಮನವನ್ನು ಭರ್ಜರಿಯಾಗಿ ಸಂಭ್ರಮಿಸಿದ್ದಾರೆ.
ಪಂತ್ ಅವರ ಸ್ಥಿತಿಸ್ಥಾಪಕತ್ವ, ಬದ್ಧತೆ, ಪ್ರತಿಭೆ, ಸಾಮರ್ಥ್ಯ ಹಾಗೂ ಆಕ್ರಮಣಕಾರಿ ಮನೋಪ್ರವೃತ್ತಿ ಆಸ್ಟ್ರೇಲಿಯಾದ ಟಿ20 ನಾಯಕ ಮಿಚೆಲ್ ಮಾರ್ಷ್ ಅವರ ಮನಸ್ಸನ್ನೂ ಗೆದ್ದಿದೆ.
"ಅವರೊಬ್ಬ ಕತ್ತರಿಸಲ್ಪಟ್ಟ ಬ್ಲಾಕ್. ಅವರು ಆಸ್ಟ್ರೇಲಿಯನ್ನರಾಗಬೇಕಿತ್ತು ಎನ್ನುವುದು ನನ್ನ ಬಯಕೆ" ಎಂದು ಸ್ಟಾರ್ಸ್ಪೋರ್ಟ್ಸ್ ವಿಡಿಯೊ ಜತೆಗೆ ಮಾತನಾಡಿದ ಮಾರ್ಷ್ ನಸುನಗುತ್ತಾ ಬಣ್ಣಿಸಿದರು. ಯಾವ ಭಾರತೀಯ ಆಟಗಾರ ಆಸ್ಟ್ರೇಲಿಯನ್ ಆಗಿರಬೇಕು ಎನ್ನುವುದು ನಿಮ್ಮ ನಂಬಿಕೆ ಎಂದು ಪ್ರಶ್ನಿಸಿದಾಗ ಟ್ರಾವಿಸ್ ಹೆಡ್ ಜತೆಗಿದ್ದ ಮಾರ್ಷ್ ಥಟ್ಟನೇ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಬಾಂಗ್ಲಾದೇಶ ವಿರುದ್ಧದ ಚೆನ್ನೈ ಟೆಸ್ಟ್ ನ ಎರಡನೇ ಇನಿಂಗ್ಸ್ ನಲ್ಲಿ ಪಂತ್ 109 ರನ್ ಗಳನ್ನು ಬಾರಿಸಿದ್ದರು ಮತ್ತು ಅಜೇಯ 119 ರನ್ ಗಳಿಸಿದ ಶುಭ್ ಮನ್ ಗಿಲ್ ಜತೆ 167 ರನ್ ಗಳ ಭರ್ಜರಿ ಜತೆಯಾಟದಲ್ಲಿ ಪಾಲ್ಗೊಂಡಿದ್ದರು. ಭಾರತ ಈ ಪಂದ್ಯವನ್ನು 280 ರನ್ ಅಂತರದಿಂದ ಗೆದ್ದಿತ್ತು.