ಫೈನಲ್ ಪಂದ್ಯದಲ್ಲಿ ಸ್ವಲ್ಪ ಹೆದರಿದ್ದೆ : ಮನು ಭಾಕರ್
ಮನು ಭಾಕರ್ | PC : PTI
ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಶನಿವಾರ ನಡೆದ 25 ಮೀ.ಶೂಟಿಂಗ್ ಸ್ಪರ್ಧೆಯ ಫೈನಲ್ ಪಂದ್ಯದಲ್ಲಿ ಸ್ವಲ್ಪ ಹೆದರಿದ್ದೆ ಎಂದು ಭಾರತದ ಶೂಟರ್ ಮನು ಭಾಕರ್ ಹೇಳಿದ್ದಾರೆ.
4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿರುವ ಭಾಕರ್ ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ 3ನೇ ವೈಯಕ್ತಿಕ ಪದಕ ಗೆಲ್ಲುವುದರಿಂದ ವಂಚಿತರಾದರು.
ಮೂರನೇ ಪದಕ ಗೆಲ್ಲುವ ವಿಚಾರದಲ್ಲಿ ನಾನು ಯಾವುದೇ ಒತ್ತಡಕ್ಕೆ ಒಳಗಾಗಿರಲಿಲ್ಲ. ನನಗೆ ಫೈನಲ್ನಲ್ಲಿ ಇಂದು ಸ್ವಲ್ಪಮಟ್ಟಿಗೆ ಹೆದರಿಕೆಯಾಗಿತ್ತು. ಆದರೆ ನಾನು ಮತ್ತೊಮ್ಮೆ ಶ್ರೇಷ್ಠ ಪ್ರದರ್ಶನ ನೀಡಲು ಪ್ರಯತ್ನಿಸಿದ್ದೇನೆ. ಆದರೆ ಅದು ಪದಕ ಗೆಲ್ಲಲು ಸಾಕಾಗಲಿಲ್ಲ. ಪ್ಯಾರಿಸ್ ಒಲಿಂಪಿಕ್ಸ್ ನನ್ನ ಪಾಲಿಗೆ ಅತ್ಯುತ್ತಮವಾಗಿತ್ತು. ನಾನು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ನತ್ತ ಈಗಾಗಲೇ ದೃಷ್ಟಿ ನೆಟ್ಟಿರುವೆ ಎಂದು ಭಾಕರ್ ಫೈನಲ್ ಪಂದ್ಯದ ನಂತರ ಪ್ರತಿಕ್ರಿಯಿಸಿದರು.
ಪ್ಯಾರಿಸ್ ಒಲಿಂಪಿಕ್ಸ್ ನ ಹೆಚ್ಚಿನ ಸ್ಪರ್ಧೆಗಳಲ್ಲಿ ನಾನು ಉತ್ತಮ ಪ್ರದರ್ಶನ ನೀಡುವಲ್ಲಿ ಶಕ್ತಳಾಗಿದ್ದೆ. ಆದರೆ ಶನಿವಾರದ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಲು ನನ್ನಿಂದ ಸಾಧ್ಯವಾಗಲಿಲ್ಲ. ಮುಂದಿನ ಒಲಿಂಪಿಕ್ಸ್ ನತ್ತ ಗಮನ ಹರಿಸುವೆ. ನಾನು ಭಾರತಕ್ಕಾಗಿ ಪದಕ ಗೆದ್ದಿರುವುದರ ಹಿಂದೆ ಸಾಕಷ್ಟು ಜನರ ಶ್ರಮವಿದೆ. ನನ್ನ ಇಡೀ ತಂಡವು ನನ್ನ ಪಯಣದುದ್ದಕ್ಕೂ ಬೆಂಬಲ ನೀಡಿರುವುದಕ್ಕೆ ತುಂಬಾ ಸಂತೋಷವಾಗಿದೆ ಎಂದು ಭಾಕರ್ ಹೇಳಿದ್ದಾರೆ.