“ನಾನು ಅವರಷ್ಟು ಉತ್ತಮ ಆಟಗಾರ ಎಂದೂ ಆಗಲಾರೆ”: ತೆಂಡೂಲ್ಕರ್ ಗೆ ಗೌರವ ಸೂಚಿಸಿದ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ (X)
ಕೋಲ್ಕತಾ: ದಕ್ಷಿಣ ಆಫ್ರಿಕಾ ತಂಡದೆದುರು 243 ರನ್ ಗಳ ಭರ್ಜರಿ ಜಯ ಗಳಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ, ತಮ್ಮ ಜನ್ಮದಿನದಂದೇ ಬ್ಯಾಟಿಂಗ್ ದೇವರು ಸಚಿನ್ ತೆಂಡೂಲ್ಕರ್ ಅವರ 49 ಶತಕಗಳ ಸಾಧನೆಯನ್ನು ಸರಿಗಟ್ಟಿದ ವಿರಾಟ್ ಕೊಹ್ಲಿ ಅರ್ಹವಾಗಿಯೇ ಪಂದ್ಯದ ಆಟಗಾರ ಪ್ರಶಸ್ತಿಗೆ ಭಾಜನರಾದರು. ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಮಾತನಾಡಿದ ಅವರು, “ಜನರು ಹೋಲಿಕೆಯನ್ನು ಇಷ್ಟಪಡುತ್ತಾರೆ ಎಂಬುದು ನನಗೆ ತಿಳಿದಿದೆ. ಆದರೆ, ನಾನು ಅವರಷ್ಟು ಉತ್ತಮ ಆಟಗಾರನಲ್ಲ. ಬ್ಯಾಟಿಂಗ್ ವಿಚಾರಕ್ಕೆ ಬಂದಾಗ ಅವರು ಪರಿಪೂರ್ಣ ಆಟಗಾರನಾಗಿರುವುದರಿಂದಲೇ ನಾವೆಲ್ಲ ಅವರತ್ತ ನೋಡುತ್ತೇವೆ” ಎಂದು ಹೇಳಿದರು ಎಂದು hindustantimes.com ವರದಿ ಮಾಡಿದೆ.
ವಿಶ್ವಕಪ್ ಕ್ರಿಕೆಟ್ 2023ರ ದಕ್ಷಿಣ ಆಫ್ರಿಕಾ ತಂಡದೆದುರಿನ ಪಂದ್ಯದಲ್ಲಿ ತಮ್ಮ 49ನೇ ಶತಕ ಸಿಡಿಸುವ ಮೂಲಕ ಭಾರತದ ತಾರಾ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ ಬಾಲ್ಯದ ಹೀರೊ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದರು. ಬ್ಯಾಟಿಂಗ್ ಗೆ ಕಠಿಣವಾಗಿದ್ದ ಪಿಚ್ ನಲ್ಲಿ ನೆಲ ಕಚ್ಚಿ ಆಟವಾಡಿದ ವಿರಾಟ್ ಕೊಹ್ಲಿ, 119 ಬಾಲ್ ಗಳಲ್ಲಿ ಈ ಐತಿಹಾಸಿಕ ಸಾಧನೆ ಮಾಡಿದರು. ಆ ಮೂಲಕ ಅಂಕಪಟ್ಟಿಯಲ್ಲಿ ಎರಡನೆ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ತಂಡದೆದುರಿನ ಈ ಪಂದ್ಯದಲ್ಲಿ ಭಾರತ ತಂಡವು 243 ರನ್ ಗಳ ಭಾರಿ ಜಯ ಗಳಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು.
ವಿರಾಟ್ ಕೊಹ್ಲಿ ಚಾರಿತ್ರಿಕ 49ನೇ ಶತಕ ಬಾರಿಸುತ್ತಿದ್ದಂತೆಯೆ x ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ ಸಚಿನ್ ತೆಂಡೂಲ್ಕರ್, ನನ್ನ 50 ಶತಕಗಳ ದಾಖಲೆಯನ್ನು ವಿರಾಟ್ ಕೊಹ್ಲಿ ಇನ್ನು ಕೆಲವೇ ದಿನಗಳಲ್ಲಿ ಮುರಿಯಲಿ ಎಂದು ಆಶಿಸಿದ್ದರು. ಆ ಮೂಲಕ ಅವರು ಈ ವಿಶ್ವಕಪ್ ನಲ್ಲೇ ವಿರಾಟ್ ಕೊಹ್ಲಿ ತಮ್ಮ ದಾಖಲೆಯನ್ನು ಮುರಿಯಲಿ ಎಂದು ಹಾರೈಸಿದ್ದರು.
ಪಂದ್ಯ ಮುಗಿದ ನಂತರ ಮಾತನಾಡಿದ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಅವರಿಂದ ಮೆಚ್ಚುಗೆಯ ಮಾತುಗಳನ್ನು ಸ್ವೀಕರಿಸಿರುವುದು ನನ್ನ ಪಾಲಿನ ಗೌರವವಾಗಿದೆ. ಆದರೆ, ನಾನೆಂದಿಗೂ ನನ್ನ ಬಾಲ್ಯದ ಹೀರೊನಷ್ಟು ಉತ್ತಮ ಆಟಗಾರನಾಗಲು ಸಾಧ್ಯವಿಲ್ಲ ಎಂದು ಸಚಿನ್ ತೆಂಡೂಲ್ಕರ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಅಜೇಯ 101 ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಈ ಕ್ರೀಡಾಕೂಟದಲ್ಲಿ ಅತ್ಯಧಿಕ ರನ್ ಗಳಿಸಿರುವ ಬ್ಯಾಟರ್ ಗಳ ಪೈಕಿ ಎರಡನೆ ಸ್ಥಾನದಲ್ಲಿದ್ದಾರೆ. ಅವರು ತಾವಾಡಿರುವ ಎಂಟು ಪಂದ್ಯಗಳಿಂದ ಒಟ್ಟು 543 ರನ್ ಕಲೆ ಹಾಕಿದ್ದಾರೆ. ಅತ್ಯಧಿಕ ರನ್ ಗಳಿಸಿರುವ ಬ್ಯಾಟರ್ ಗಳ ಪೈಕಿ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಅಗ್ರಸ್ಥಾನದಲ್ಲಿದ್ದು, ಅವರು ತಮ್ಮ ಹೆಸರಿಗೆ 550 ರನ್ ಜಮೆ ಮಾಡಿಕೊಂಡಿದ್ದಾರೆ.