2024ರ ಐಸಿಸಿ ಪುರುಷರ ವರ್ಷದ ಕ್ರಿಕೆಟಿಗ ಬುಮ್ರಾಗೆ ಸರ್ ಗ್ಯಾರ್ಫೀಲ್ಡ್ ಸೋಬರ್ಸ್ ಪ್ರಶಸ್ತಿ

(PTI photo)
ದುಬೈ: ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾರನ್ನು 2024ರ ಐಸಿಸಿ ಪುರುಷರ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅವರನ್ನು ಪ್ರತಿಷ್ಠಿತ ಸರ್ ಗ್ಯಾರ್ಫೀಲ್ಡ್ ಸೋಬರ್ಸ್ ಪ್ರಶಸ್ತಿಯಿಂದ ಗೌರವಿಸಲಾಗುವುದು.
ಸ್ಪರ್ಧೆಯಲ್ಲಿದ್ದ ಟ್ರಾವಿಸ್ ಹೆಡ್, ಜೋ ರೂಟ್ ಮತ್ತು ಹ್ಯಾರಿ ಬ್ರೂಕ್ರನ್ನು ಹಿಂದಿಕ್ಕಿದ ಬುಮ್ರಾ ಈ ಪ್ರಶಸ್ತಿ ಗೆದ್ದರು. ಅವರು ಈ ಪ್ರಶಸ್ತಿ ಪಡೆದ ಐದನೇ ಭಾರತೀಯನಾದರು.
ಅವರಿಗಿಂತಲೂ ಮೊದಲು ಈ ಪ್ರಶಸ್ತಿಯನ್ನು ರಾಹುಲ್ ದ್ರಾವಿಡ್ (2004), ಸಚಿನ್ ತೆಂಡುಲ್ಕರ್ (2010), ರವಿಚಂದ್ರನ್ ಅಶ್ವಿನ್ (2016) ಮತ್ತು ವಿರಾಟ್ ಕೊಹ್ಲಿ (2107, 2018) ಸ್ವೀಕರಿಸಿದ್ದಾರೆ.
‘‘ಎಲ್ಲಾ ಮಾದರಿಗಳ ಕ್ರಿಕೆಟ್ನಲ್ಲಿ ಜಸ್ಪ್ರೀತ್ ಬುಮ್ರಾರ 2024ರ ಸಾಧನೆ ಗಮನಾರ್ಹ. ಅವರು ಈ ಅವಧಿಯಲ್ಲಿ ಕೌಶಲ, ನಿಖರತೆ ಮತ್ತು ಸ್ಥಿರತೆಯನ್ನು ಪ್ರದರ್ಶಿಸಿದ್ದಾರೆ. ಅವರು ದಾಖಲೆಗಳ ಬೆನ್ನಿಗೆ ದಾಖಲೆಗಳನ್ನು ನಿರ್ಮಿಸಿ, ಜಗತ್ತಿನ ಪ್ರಮುಖ ವೇಗದ ಬೌಲರ್ ಎಂಬ ತನ್ನ ಸ್ಥಾನವನ್ನು ಗಟ್ಟಿಗೊಳಿಸಿದ್ದಾರೆ’’ ಎಂದು ಐಸಿಸಿ ವೆಬ್ಸೈಟ್ ಹೇಳಿದೆ.
‘‘ಐಸಿಸಿ ಟೆಸ್ಟ್ ರ್ಯಾಂಕಿಂಗ್ಸ್ನಲ್ಲಿ ಹಾಲಿ ನಂಬರ್ ವನ್ ಬೌಲರ್ ಆಗಿರುವ ಅವರು 200 ಟೆಸ್ಟ್ ವಿಕೆಟ್ಗಳನ್ನು ಅತ್ಯಂತ ಕ್ಷಿಪ್ರವಾಗಿ ಗಳಿಸಿದ ಭಾರತೀಯ ವೇಗದ ಬೌಲರ್ ಆಗಿದ್ದಾರೆ. ಅವರು ಈ ಸಾಧನೆಯನ್ನು 20ಕ್ಕಿಂತಲೂ ಕೆಳಗಿನ ಬೌಲಿಂಗ್ ಸರಾಸರಿಯೊಂದಿಗೆ ಮಾಡಿದ್ದಾರೆ. ಇದು ಇತಿಹಾಸದಲ್ಲೇ ಶ್ರೇಷ್ಠವಾಗಿದೆ’’ ಎಂದು ಅದು ತಿಳಿಸಿದೆ.
ಬುಮ್ರಾರನ್ನು ಸೋಮವಾರ ಐಸಿಸಿ ಪುರುಷರ ವರ್ಷದ ಟೆಸ್ಟ್ ಕ್ರಿಕೆಟಿಗನಾಗಿ ಹೆಸರಿಸಲಾಗಿತ್ತು. ಅವರು 2024ರಲ್ಲಿ 15ಕ್ಕಿಂತಲೂ ಕಡಿಮೆ ಸರಾಸರಿಯಲ್ಲಿ, 13 ಪಂದ್ಯಗಳಲ್ಲಿ ಆಡಿ 71 ವಿಕೆಟ್ಗಳನ್ನು ಕಲೆಹಾಕಿದ್ದಾರೆ.