ಐಸಿಸಿ ಪ್ರಶಸ್ತಿ | ಜೋ ರೂಟ್ ರನ್ನು ಹಿಂದಿಕ್ಕಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾದ ಜಸ್ಪ್ರೀತ್ ಬುಮ್ರಾ
ವರ್ಷದ ಮಹಿಳಾ ಕ್ರಿಕೆಟಗರಾಗಿ ಸ್ಮೃತಿ ಮಂದಾನ ಆಯ್ಕೆ
ಜಸ್ಪ್ರೀತ್ ಬುಮ್ರಾ | PC : NDTV
ಲಂಡನ್: 2024ನೇ ಸಾಲಿನ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ತೀವ್ರ ಪೈಪೋಟಿ ನೀಡಿದ್ದ ಇಂಗ್ಲೆಂಡ್ ತಂಡದ ಜೋ ರೂಟ್ ರನ್ನು ಹಿಂದಿಕ್ಕಿ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
2024ರ ಋತುವಿನಲ್ಲಿ 13 ಪಂದ್ಯಗಳಲ್ಲಿ 357 ಓವರ್ ಗಳನ್ನು ಬೌಲಿಂಗ್ ಮಾಡಿರುವ ಬುಮ್ರಾ, ಅಮೋಘ 71 ವಿಕೆಟ್ ಗಳನ್ನು ಕಿತ್ತಿದ್ದಾರೆ. ಅನಿಲ್ ಕುಂಬ್ಳೆ, ರವಿಚಂದ್ರನ್ ಅಶ್ವಿನ್ ಹಾಗೂ ಕಪಿಲ್ ದೇವ್ ನಂತರ, ಒಂದು ವರ್ಷದ ಋತುವಿನಲ್ಲಿ 70ಕ್ಕೂ ಹೆಚ್ಚು ವಿಕೆಟ್ ಕಿತ್ತ ನಾಲ್ಕನೆ ಭಾರತೀಯ ಬೌಲರ್ ಎಂಬ ಹಿರಿಮೆಗೆ ಬುಮ್ರಾ ಭಾಜನರಾಗಿದ್ದಾರೆ.
ಈ ಅಮೋಘ ಸಾಧನೆಯ ಕಾರಣಕ್ಕೆ ತಮಗೆ ತೀವ್ರ ಪೈಪೋಟಿ ನೀಡಿದ್ದ ಶ್ರೀಲಂಕಾದ ಕಮಿಂದು ಮೆಂಡಿಸ್ ಹಾಗೂ ಇಂಗ್ಲೆಂಡ್ ಬ್ಯಾಟರ್ ದ್ವಯರಾದ ಹ್ಯಾರಿ ಬ್ರೂಕ್ ಹಾಗೂ ಜೋಸ್ ರೂಟ್ ರನ್ನು ಹಿಂದಿಕ್ಕಿ ಬುಮ್ರಾ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ.
2024ರ ಋತುವಿನಲ್ಲಿ ದೇಶೀಯ ಹಾಗೂ ವಿದೇಶಿ ಪರಿಸ್ಥಿತಿ ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ತೋರಿರುವ ಬುಮ್ರಾ, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ತಲುಪುವ ಭಾರತದ ಕನಸನ್ನು ಜೀವಂತವಾಗಿ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಹೀಗಿದ್ದೂ, ಭಾರತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ತಲುಪುವಲ್ಲಿ ವಿಫಲಗೊಂಡಿತ್ತು.
ಬುಮ್ರಾರ ಅಮೋಘ 2024ರ ಋತು ಕೇಪ್ ಟೌನ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಗಳಿಸಿದ ಸ್ಮರಣೀಯ ಗೆಲುವಿನೊಂದಿಗೆ ಪ್ರಾರಂಭಗೊಂಡಿತ್ತು. ಈ ಪಂದ್ಯದಲ್ಲಿ ಅವರು ಒಟ್ಟು 8 ವಿಕೆಟ್ ಗಳನ್ನು ಕಿತ್ತಿದ್ದರು. ಇದಾದ ನಂತರ ಭಾರತದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಒಟ್ಟು 19 ವಿಕೆಟ್ ಗಳನ್ನು ತಮ್ಮ ಖಾತೆಗೆ ಜಮಾ ಮಾಡಿಕೊಂಡಿದ್ದರು.
ಇದರೊಂದಿಗೆ, 2024ನೇ ಸಾಲಿನ ವರ್ಷದ ಮಹಿಳಾ ಕ್ರಿಕೆಟಿಗ ಪ್ರಶಸ್ತಿ ಕೂಡಾ ಭಾರತ ತಂಡದ ಉಪ ನಾಯಕಿ ಸ್ಮೃತಿ ಮಂದಾನ ಪಾಲಾಗಿದೆ. ಅವರು 2024ರ ಋತುವಿನಲ್ಲಿ ಏಕ ದಿನ ಪಂದ್ಯಗಳ 13 ಇನಿಂಗ್ಸ್ ಗಳಿಂದ ಒಟ್ಟು 747 ರನ್ ಗಳಿಸಿದ್ದರು.
ಸ್ಮೃತಿ ಮಂದಾನಗೆ ಲಾರಾ ವೋಲ್ವಾರ್ಡ್ಟ್ (697), ಟ್ಯಾಮಿ ಬೀಮಾಂಟ್ (554) ಹಾಗೂ ಹೇಲೇ ಮ್ಯಾಥ್ಯೂ (469) ತೀವ್ರ ಪೈಪೋಟಿ ನೀಡಿದ್ದರು.
2025ರ ಋತುವಿನಲ್ಲೂ ಕೂಡಾ ಸ್ಮೃತಿ ಮಂದಾನ ಉತ್ತಮ ಲಯದಲ್ಲಿದ್ದಾರೆ.