ಐಸಿಸಿ ಚಾಂಪಿಯನ್ಸ್ ಟ್ರೋಫಿ | ಕೊನೆಗೂ ನಿಲುವು ಸಡಿಲಿಸಿ ಹೈಬ್ರಿಡ್ ಮಾದರಿ ಒಪ್ಪಿಕೊಂಡ ಪಿಸಿಬಿ
PC : @ICC
ಕರಾಚಿ : ಕೊನೆಗೂ ತನ್ನ ಕಠಿಣ ನಿಲುವನ್ನು ಸಡಿಲಿಸಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಹೈಬ್ರಿಡ್ ಮಾದರಿಯನ್ನು ಒಪ್ಪಿಕೊಳ್ಳಲು ಸಿದ್ದವಿರುವುದಾಗಿ ಹೇಳಿದೆ.
2031ರ ತನಕ ಭಾರತದಲ್ಲಿ ನಡೆಯಲಿರುವ ವಿಶ್ವ ಟೂರ್ನಿಗಳಲ್ಲೂ ಇದೇ ರೀತಿಯ ವ್ಯವಸ್ಥೆ ಮಾಡುವಂತೆ ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ(ಐಸಿಸಿ)ವಿನಂತಿಸಿದೆ.
ಭಾರತವು 2031ರ ತನಕ ಮೂರು ಪುರುಷರ ಟೂರ್ನಿಗಳ ಆತಿಥ್ಯವಹಿಸಲಿದೆ. 2026ರಲ್ಲಿ ಶ್ರೀಲಂಕಾದ ಜೊತೆಗೂಡಿ ಟಿ20 ವಿಶ್ವಕಪ್, 2029ರಲ್ಲಿ ಚಾಂಪಿಯನ್ಸ್ ಟ್ರೋಫಿ ಹಾಗೂ 2031ರಲ್ಲಿ ಬಾಂಗ್ಲಾದೇಶ ಜೊತೆಗೂಡಿ ಏಕದಿನ ವಿಶ್ವಕಪ್ ಆತಿಥ್ಯವಹಿಸಲಿದೆ.
ಪಾಕಿಸ್ತಾನಕ್ಕೆ ಮುಂಬರುವ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸುವ ಸಂಪೂರ್ಣ ಹಕ್ಕು ನೀಡದೇ ಇದ್ದರೆ ಟೂರ್ನಿಯನ್ನು ಬಹಿಷ್ಕರಿಸುವ ಕುರಿತು ಪಿಸಿಬಿ ನಿರ್ಧಾರ ತಳೆದಿತ್ತು.
ಒಂದು ವೇಳೆ ಚಾಂಪಿಯನ್ಸ್ ಟ್ರೋಫಿಯು ಹೈಬ್ರಿಡ್ ಮಾದರಿಯಲ್ಲೇ ನಡೆದರೆ, ಭಾರತ ತಂಡವು ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡುವ ಸಾಧ್ಯತೆಯಿದೆ.
ಭವಿಷ್ಯದಲ್ಲಿ ಎಲ್ಲ ಐಸಿಸಿ ಸ್ಪರ್ಧೆಗಳು ಒಂದೇ ವ್ಯವಸ್ಥೆಯಲ್ಲಿ ನಡೆಯುತ್ತವೆ ಎಂದು ಐಸಿಸಿ ಒಪ್ಪಿಕೊಂಡರೆ ಮಾತ್ರ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ಒಪ್ಪಿಕೊಳ್ಳುತ್ತೇವೆ ಎಂದು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಹೇಳಿದ್ದಾರೆ.
ಪಾಕಿಸ್ತಾನ ತಂಡ ಕೂಡ ಪಂದ್ಯಗಳನ್ನು ಆಡಲು ಭಾರತಕ್ಕೆ ಹೋಗುವುದಿಲ್ಲ ಎಂದು ಮೂಲವನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.
ಹೈಬ್ರಿಡ್ ಮಾದರಿಯನ್ನು ಸ್ವೀಕರಿಸಲು ಪಿಸಿಬಿಗೆ ಹಣಕಾಸಿನ ಪ್ರಯೋಜನಗಳನ್ನು ಕೂಡ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಕೋರಿದ್ದಾರೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.