ಪಿಒಕೆಗೆ ಚಾಂಪಿಯನ್ಸ್ ಟ್ರೋಫಿ ಒಯ್ಯದಂತೆ ಪಿಸಿಬಿಗೆ ಐಸಿಸಿ ಸೂಚನೆ
PC : @ICC
ಹೊಸದಿಲ್ಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿರುವ ಸ್ಕರ್ದು, ಹುಂಝಾ ಹಾಗೂ ಮುಝಫರಾಬಾದ್ ನಗರಗಳಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಕೊಂಡೊಯ್ದು ಪ್ರಚಾರ ನಡೆಸುವ ಯೋಜನೆಯನ್ನು ರದ್ದುಪಡಿಸುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ(ಪಿಸಿಬಿ)ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಸೂಚಿಸಿದೆ. ಇದರಿಂದಾಗಿ ಪಿಸಿಬಿ ಭಾರೀ ಹಿನ್ನಡೆ ಅನುಭವಿಸಿದೆ.
ಪಿಸಿಬಿ ಯೋಜನೆಗೆ ಬಿಸಿಸಿಐ ಆಕ್ಷೇಪ ವ್ಯಕ್ತಪಡಿಸಿದ ನಂತರ ಐಸಿಸಿ ಈ ನಿರ್ಧಾರ ಕೈಗೊಂಡಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪರ್ಯಟನೆಯ ಕುರಿತು ಪಿಸಿಬಿ ಗುರುವಾರ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಇದರನ್ವಯ ನ.16ರಂದು ಇಸ್ಲಾಮಾಬಾದ್ನಲ್ಲಿ ಟ್ರೋಫಿಯ ತಿರುಗಾಟ ಆರಂಭವಾಗಲಿದೆ.
ನ.16ರಂಂದು ಇಸ್ಲಾಮಾಬಾದ್ನಲ್ಲಿ ಟ್ರೋಫಿ ತನ್ನ ಪರ್ಯಟನೆ ಆರಂಭಿಸಲಿದೆ. ಟ್ರೋಫಿಯನ್ನು ಪಿಒಕೆ ನಗರಗಳಲ್ಲೂ ಕೊಂಡೊಯ್ಯಲಾಗುತ್ತದೆ. 2017ರಲ್ಲಿ ದಿ ಓವಲ್ನಲ್ಲಿ ಸರ್ಫರಾಝ್ ಅಹ್ಮದ್ ಎತ್ತಿ ಹಿಡಿದ ಟ್ರೋಫಿಯ ದೃಶ್ಯವನ್ನು ಸೆರೆ ಹಿಡಿಯುವ ಅವಕಾಶವು ನ.16ರಿಂದ 24ರ ತನಕ ಸಿಗಲಿದೆ ಎಂದು ಪಿಸಿಬಿ ಗುರುವಾರ ಎಕ್ಸ್ನಲ್ಲಿ ಪೋಸ್ಟ್ ಹಾಕಿತ್ತು.
ಚಾಂಪಿಯನ್ಸ್ ಟ್ರೋಫಿಯ ಅಂತಿಮ ವೇಳಾಪಟ್ಟಿಯನ್ನು ಐಸಿಸಿ ಇನ್ನೂ ಪ್ರಕಟಿಸದಿದ್ದರೂ ಚಾಂಪಿಯನ್ಸ್ ಟ್ರೋಫಿಯು ಗುರುವಾರ ಪಾಕಿಸ್ತಾನಕ್ಕೆ ಆಗಮಿಸಿದೆ.
ಪಂದ್ಯಾವಳಿಗಾಗಿ ಭಾರತ ತಂಡವು ಪಾಕ್ಗೆ ಪ್ರಯಾಣಿಸಲು ನಿರಾಕರಿಸಿದ ನಂತರ ಹೈಬ್ರಿಡ್ ಮಾದರಿಯಲ್ಲಿ ಪ್ರತಿಷ್ಠಿತ ಟೂರ್ನಿಯನ್ನು ಆಯೋಜಿಸುವ ಬಗ್ಗೆ ಪಿಸಿಬಿಯಿಂದ ಐಸಿಸಿ ಪ್ರತಿಕ್ರಿಯೆಯನ್ನು ಕೋರಿರುವ ಸಮಯದಲ್ಲಿ ಟ್ರೋಫಿ ಆಗಮಿಸಿದೆ.