ವಿಶ್ವಕಪ್ ಆತಿಥ್ಯವಹಿಸಲಿರುವ 10 ಸ್ಟೇಡಿಯಮ್ ಗಳತ್ತ ಒಂದು ಸುತ್ತು
ಎಂ.ಚಿನ್ನಸ್ವಾಮಿ ಸ್ಟೇಡಿಯಮ್, ಬೆಂಗಳೂರು | Photo : bcci
ಹೊಸದಿಲ್ಲಿ: ಭಾರತದ ಆತಿಥ್ಯದಲ್ಲಿ ನಡೆಯುವ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯು 10 ಸ್ಟೇಡಿಯಮ್ ಗಳಲ್ಲಿ ಅ.5ರಿಂದ ನ.19ರ ತನಕ ನಡೆಯಲಿದೆ.
ವಾಂಖೆಡೆ ಸ್ಟೇಡಿಯಮ್, ಮುಂಬೈ: 2011ರಲ್ಲಿ ಭಾರತದ 2ನೇ ವಿಶ್ವಕಪ್ ಗೆಲುವಿಗೆ ಸಾಕ್ಷಿಯಾಗಿದ್ದ ಮುಂಬೈನ ಪ್ರಮುಖ ವಾಂಖೆಡೆ ಸ್ಟೇಡಿಯಮ್ 32,000 ಪ್ರೇಕ್ಷಕರ ಸಾಮರ್ಥ್ಯ ಹೊಂದಿದ್ದು, ಭಾರತ-ಶ್ರೀಲಂಕಾ ಪಂದ್ಯ ಹಾಗೂ ಮೊದಲ ಸೆಮಿ ಫೈನಲ್ ಸಹಿತ ಒಟ್ಟು 5 ಪಂದ್ಯಗಳ ಆತಿಥ್ಯವಹಿಸಲಿದೆ.
ರಾಜೀವ್ ಗಾಂಧಿ ಸ್ಟೇಡಿಯಮ್, ಹೈದರಾಬಾದ್: ಈ ಸ್ಟೇಡಿಯಮ್ ನಲ್ಲಿ 55,000 ಪ್ರೇಕ್ಷಕರು ಕುಳಿತುಕೊಳ್ಳಬಹುದು. ಈ ಮೈದಾನ 3 ಪಂದ್ಯಗಳ ಆತಿಥ್ಯವಹಿಸಲಿದ್ದು, ಇದರಲ್ಲಿ ಭಾರತದ ಪಂದ್ಯವಿಲ್ಲ.
ಈಡನ್ ಗಾರ್ಡನ್ಸ್, ಕೋಲ್ಕತಾ: ಭಾರತದ ಅತ್ಯಂತ ಹಳೆಯ ಕ್ರಿಕೆಟ್ ಕ್ರೀಡಾಂಗಣವಾಗಿರುವ ಈಡನ್ ಗಾರ್ಡನ್ಸ್ ಸದ್ಯ 68,000 ಪ್ರೇಕ್ಷಕರ ಸಾಮರ್ಥ್ಯ ಹೊಂದಿದ್ದು ಸೆಮಿ ಫೈನಲ್ ಹಾಗೂ ಭಾರತ-ದಕ್ಷಿಣ ಆಫ್ರಿಕಾ ಪಂದ್ಯ ಸಹಿತ ಒಟ್ಟು 5 ಪಂದ್ಯಗಳ ಆತಿಥ್ಯ ವಹಿಸಲಿದೆ.
ಭಾರತರತ್ನ ಎಬಿ ವಾಜಪೇಯಿ ಸ್ಟೇಡಿಯಮ್, ಲಕ್ನೋ: ಹೊಸ ಕ್ರೀಡಾಂಗಣವಾಗಿರುವ ಇದು ಭಾರತ-ಇಂಗ್ಲೆಂಡ್ ಲೀಗ್ ಪಂದ್ಯ ಸಹಿತ 5 ಪಂದ್ಯಗಳ ಆತಿಥ್ಯವಹಿಸಲಿದೆ.
ಎಂ.ಚಿದಂಬರಂ ಸ್ಟೇಡಿಯಮ್, ಚೆನ್ನೈ: ಚಿಪಾಕ್ ಎಂದೇ ಕರೆಯಲ್ಪಡುವ ಈ ಮೈದಾನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ತವರು ಮೈದಾನವಾಗಿದೆ. ಇದು ಭಾರತ-ಆಸ್ಟ್ರೇಲಿಯ ಪಂದ್ಯ ಸಹಿತ 5 ಪಂದ್ಯಗಳನ್ನು ಆಯೋಜಿಸಲಿದೆ.
ಅರುಣ್ ಜೇಟ್ಲಿ ಸ್ಟೇಡಿಯಮ್, ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿರುವ ಈ ಸ್ಟೇಡಿಯಮ್ 41,842 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದೆ. ಭಾರತ-ಅಫ್ಘಾನಿಸ್ತಾನ ಸಹಿತ 5 ಪಂದ್ಯಗಳ ಆತಿಥ್ಯವಹಿಸಲಿದೆ.
ನರೇಂದ್ರ ಮೋದಿ ಸ್ಟೇಡಿಯಮ್, ಅಹ್ಮದಾಬಾದ್: 1,34,000 ಪ್ರೇಕ್ಷಕರು ಕುಳಿತುಕೊಳ್ಳಬಹುದಾದ ವಿಶ್ವದ ಬೃಹತ್ ಕ್ರಿಕೆಟ್ ಕ್ರೀಡಾಂಗಣವಾಗಿರುವ ಇದು ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಹಾಗೂ ಫೈನಲ್ ಸಹಿತ 5 ಪಂದ್ಯಗಳ ಆತಿಥ್ಯ ವಹಿಸಲಿದೆ.
ಎಚ್ ಪಿಸಿಎ ಸ್ಟೇಡಿಯಮ್, ಧರ್ಮಶಾಲಾ: ವಿಶ್ವದ ಅತ್ಯಂತ ಸುಂದರ ಕ್ರಿಕೆಟ್ ಕ್ರೀಡಾಂಗಣದ ಪೈಕಿ ಒಂದಾಗಿರುವ ಇದು ಕಿರಿದಾದ ಸ್ಟೇಡಿಯಮ್ ಆಗಿದೆ. ಭಾರತ-ನ್ಯೂಝಿಲ್ಯಾಂಡ್ ಪಂದ್ಯ ಸಹಿತ ಒಟ್ಟು 5 ಪಂದ್ಯಗಳ ಆತಿಥ್ಯಕ್ಕೆ ಸಜ್ಜಾಗಿದೆ.
ಎಂ.ಚಿನ್ನಸ್ವಾಮಿ ಸ್ಟೇಡಿಯಮ್, ಬೆಂಗಳೂರು: ನಗರದ ಹೃದಯಭಾಗದಲ್ಲಿರುವ 54 ವರ್ಷಗಳ ಹಳೆಯ ಈ ಸ್ಟೇಡಿಯಮ್ 32,000 ಪ್ರೇಕ್ಷಕರ ಸಾಮರ್ಥ್ಯ ಹೊಂದಿದೆ. ವಿಶ್ವಕಪ್ ನಲ್ಲಿ ಭಾರತ-ನೆದರ್ ಲ್ಯಾಂಡ್ಸ್ ಸಹಿತ ಒಟ್ಟು 5 ಗ್ರೂಪ್ ಹಂತದ ಪಂದ್ಯಗಳ ಆತಿಥ್ಯವಹಿಸಲಿದೆ.
ಎಂಸಿಎ ಸ್ಟೇಡಿಯಮ್, ಪುಣೆ: ಮಹಾರಾಷ್ಟ್ರದ 2ನೇ ವಿಶ್ವಕಪ್ ತಾಣವಾಗಿರುವ ಎಂಸಿಎ ಸ್ಟೇಡಿಯಮ್ ಭಾರತ-ಬಾಂಗ್ಲಾದೇಶ ಪಂದ್ಯ ಸಹಿತ ಒಟ್ಟು 5 ಪಂದ್ಯಗಳ ಆತಿಥ್ಯವಹಿಸಲಿದೆ.