ಐಸಿಸಿ ರ್ಯಾಂಕಿಂಗ್; ಆಲ್ರೌಂಡರ್ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದ ಹಿರಿಯ ಆಟಗಾರ ಮುಹಮ್ಮದ್ ನಬಿ
ಮುಹಮ್ಮದ್ ನಬಿ | Photo; X
ಹೊಸದಿಲ್ಲಿ: ಐಸಿಸಿ ಏಕದಿನ ಆಲ್ರೌಂಡರ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಹಿರಿಯ ಆಟಗಾರನಾಗಿರುವ ಅಫ್ಘಾನಿಸ್ತಾನದ ಆಲ್ರೌಂಡರ್ ಮುಹಮ್ಮದ್ ನಬಿ ಬುಧವಾರ ಇತಿಹಾಸ ನಿರ್ಮಿಸಿದರು.
39 ವರ್ಷ ವಯಸ್ಸಿನ ನಬಿ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಕಾರಣ ನಂ.1 ಸ್ಥಾನಕ್ಕೇರಿದ್ದಾರೆ. ಶ್ರೀಲಂಕಾ ವಿರುದ್ಧ ನಬಿ ವಿಕೆಟ್ ಕಬಳಿಸಿದ್ದಲ್ಲದೆ 136 ರನ್ ಗಳಿಸಿದ್ದರು.
ಈ ಮೂಲಕ ನಬಿ ಅವರು ತಿಲಕರತ್ನೆ ದಿಲ್ಶನ್ ದಾಖಲೆಯನ್ನು ಮುರಿದರು. ದಿಲ್ಶನ್ 2015ರ ಜೂನ್ನಲ್ಲಿ 38ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು.
ಬಾಂಗ್ಲಾದೇಶದ ಆಲ್ರೌಂಡರ್ ಶಾಕಿಬ್ ಅಲ್ ಹಸನ್ 2019ರ ಮೇ 7ರಿಂದ ರಶೀದ್ ಖಾನ್ರಿಂದ ಅಗ್ರ ಸ್ಥಾನ ಪಡೆದ ನಂತರ 1,739 ದಿನಗಳ ಕಾಲ ಮೊದಲ ಸ್ಥಾನವನ್ನು ಉಳಿಸಿಕೊಂಡಿದ್ದರು.
*ಟೆಸ್ಟ್ ಕ್ರಿಕೆಟ್ ನಲ್ಲಿ ಬುಮ್ರಾ ನಂ.1
ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತದ ಜಸ್ಪ್ರೀತ್ ಬುಮ್ರಾ ನಂ.1 ಬೌಲರ್ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಗುರುವಾರ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಡಲು ಸಜ್ಜಾಗುತ್ತಿರುವ ರವೀಂದ್ರ ಜಡೇಜ ಟೆಸ್ಟ್ ಆಲ್ರೌಂಡರ್ ಗಳ ರ್ಯಾಂಕಿಂಗ್ ನಲ್ಲಿ ಈಗಲೂ ನಂ.1 ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಏಕದಿನ ಬೌಲಿಂಗ್ ರ್ಯಾಂಕಿಂಗ್ ನಲ್ಲಿ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕೇಶವ ಮಹಾರಾಜ್ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಇದೇ ವೇಳೆ ಶ್ರೀಲಂಕಾದ ವನಿಂದು ಹಸರಂಗ(14 ಸ್ಥಾನ ಮೇಲಕ್ಕೇರಿ 26ನೇ ಸ್ಥಾನ) ಹಾಗೂ ದಿಲ್ಶನ್ ಮದುಶಂಕ(4 ಸ್ಥಾನ ಮೇಲಕ್ಕೇರಿ 33ನೇ ಸ್ಥಾನ)ಬುಧವಾರ ಬಿಡುಗಡೆಯಾಗಿರುವ ರ್ಯಾಂಕಿಂಗ್ ನಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.