ಐಸಿಸಿ ಟಿ20 ರ್ಯಾಂಕಿಂಗ್ | ಹಾರ್ದಿಕ್ ಪಾಂಡ್ಯ ನಂ.1 ಆಲ್ರೌಂಡರ್

ಹಾರ್ದಿಕ್ ಪಾಂಡ್ಯ | PC : @hardikpandya7
ಹೊಸದಿಲ್ಲಿ : ಐಸಿಸಿ ಟಿ20 ರ್ಯಾಂಕಿಂಗ್ ಬಿಡುಗಡೆಯಾಗಿದ್ದು, ಹಾರ್ದಿಕ್ ಪಾಂಡ್ಯ ನಂ.1 ಆಲ್ರೌಂಡರ್ ಆಗಿ ಹೊರಹೊಮ್ಮಿದ್ದಾರೆ. ಟಿ20 ವಿಶ್ವಕಪ್ ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಭಾರತ ತಂಡದ ಗೆಲುವಿನಲ್ಲಿ ಹಾರ್ದಿಕ್ ಪ್ರಮುಖ ಪಾತ್ರವಹಿಸಿದ್ದರು.
ಶ್ರೀಲಂಕಾದ ವನಿಂದು ಹಸರಂಗ ಅವರೊಂದಿಗೆ ಪಾಂಡ್ಯ 222 ಅಂಕದೊಂದಿಗೆ ಜಂಟಿ ಅಗ್ರಸ್ಥಾನವನ್ನು ಹಂಚಿಕೊಂಡಿದ್ದಾರೆ. ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೋಲುವ ಹಂತದಲ್ಲಿ ದಕ್ಷಿಣ ಆಫ್ರಿಕಾದ ಕ್ಲಾಸೆನ್ ಹಾಗೂ ಮಿಲ್ಲರ್ ಅವರ ವಿಕೆಟ್ ಉರುಳಿಸಿದ್ದ ಹಾರ್ದಿಕ್, 20 ರನ್ ಗೆ 3 ಪ್ರಮಖ ವಿಕೆಟ್ ಗಳಿಸಿದ್ದರು. ಅಲ್ಲದೇ 8 ಪಂದ್ಯಗಳಲ್ಲಿ ಆರು ಇನ್ನಿಂಗ್ಸ್ಗಳಲ್ಲಿ ಅವರು ಒಂದು ಅರ್ಧ ಶತಕ ಸಹಿತ 144 ರನ್ ಗಳಿಸಿದ್ದರು.
ಟಿ20 ರ್ಯಾಂಕಿಂಗ್ನ ಬ್ಯಾಟಿಂಗ್ ವಿಭಾಗದಲ್ಲಿ ಟ್ರಾವಿಸ್ ಹೆಡ್ ನಂ.1 ಸ್ಥಾನದಲ್ಲಿದ್ದಾರೆ. ʼಸ್ಕೈʼ ಖ್ಯಾತಿಯ ಸೂರ್ಯಕುಮಾರ್ ಯಾದವ್ ನಂ. 2 ಸ್ಥಾನದಲ್ಲಿ ಮುಂದುವರೆದಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಇಂಗ್ಲೆಂಡ್ ನ ಆದಿಲ್ ರಶೀದ್ 675 ರೇಟಿಂಗ್ ಅಂಕಗಳೊಂದಿಗೆ ನಂ.1 ಸ್ಥಾನದಲ್ಲಿದ್ದಾರೆ.
ಅಕ್ಷರ್ ಪಟೇಲ್ ನಂ.7, ಕುಲ್ದೀಪ್ ಯಾದವ್ ನಂ.8ನೇ ಸ್ಥಾನ ಪಡೆದಿದ್ದಾರೆ. ಜಸ್ಪ್ರೀತ್ ಬುಮ್ರಾ 12ನೇ ಸ್ಥಾನದಲ್ಲಿದ್ದಾರೆ.