ಐಸಿಸಿ ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್: ನಂ.1 ಸ್ಥಾನಕ್ಕೇರಿದ ಹ್ಯಾರಿ ಬ್ರೂಕ್
ಅಗ್ರಸ್ಥಾನ ಕಾಯ್ದುಕೊಂಡ ಜಸ್ಪ್ರಿತ್ ಬುಮ್ರಾ, ರವೀಂದ್ರ ಜಡೇಜ

ಹ್ಯಾರಿ ಬ್ರೂಕ್ | PTI
ದುಬೈ : ಇಂಗ್ಲೆಂಡ್ನ ಹ್ಯಾರಿ ಬ್ರೂಕ್ ಅವರು ತಮ್ಮದೇ ದೇಶದ ಜೋ ರೂಟ್ರನ್ನು ಹಿಂದಿಕ್ಕಿ ಬುಧವಾರ ಬಿಡುಗಡೆಯಾದ ಐಸಿಸಿ ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ.
ಇದೇ ವೇಳೆ ಭಾರತದ ಜಸ್ಪ್ರಿತ್ ಬುಮ್ರಾ ಹಾಗೂ ರವೀಂದ್ರ ಜಡೇಜ ಅವರು ಟೆಸ್ಟ್ ಕ್ರಿಕೆಟ್ನಲ್ಲಿ ಕ್ರಮವಾಗಿ ಬೌಲರ್ಗಳು ಹಾಗೂ ಆಲ್ರೌಂಡರ್ಗಳ ರ್ಯಾಂಕಿಂಗ್ನಲ್ಲಿ ಅಗ್ರ ಸ್ಥಾನದಲ್ಲೇ ಮುಂದುವರಿದಿದ್ದಾರೆ.
ಕಳೆದ ವಾರ ವೆಲ್ಲಿಂಗ್ಟನ್ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ತನ್ನ 8ನೇ ಟೆಸ್ಟ್ ಶತಕವನ್ನು ಸಿಡಿಸಿದ್ದ 25ರ ಹರೆಯದ ಬ್ರೂಕ್ ಅವರು 898 ರೇಟಿಂಗ್ ಪಾಯಿಂಟ್ಸ್ ಪಡೆದು ತನ್ನ ಸಹ ಆಟಗಾರ ರೂಟ್ಗಿಂತ ಒಂದು ಅಂಕದಿಂದ ಮುನ್ನಡೆ ಪಡೆದರು.
ಕೇನ್ ವಿಲಿಯಮ್ಸನ್ರನ್ನು ಹಿಂದಿಕ್ಕಿ ಜುಲೈನಿಂದ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದ ರೂಟ್ ಅವರು ಇತ್ತೀಚೆಗಿನ ಟೆಸ್ಟ್ ಪಂದ್ಯದಲ್ಲಿ 3 ಹಾಗೂ 106 ರನ್ ಗಳಿಸಿದ್ದರು. ಬ್ರೂಕ್ ಅವರು ನ್ಯೂಝಿಲ್ಯಾಂಡ್ ವಿರುದ್ಧ 123 ರನ್ ಹಾಗೂ 55 ರನ್ ಗಳಿಸಿ 323 ರನ್ ಅಂತರದಿಂದ ಜಯಶಾಲಿಯಾಗಲು ಮುಖ್ಯ ಪಾತ್ರವಹಿಸಿದ್ದರು.
ಬೌಲಿಂಗ್ ರ್ಯಾಂಕಿಂಗ್ನಲ್ಲಿ ಬುಮ್ರಾ ಅವರು 890 ರೇಟಿಂಗ್ ಪಾಯಿಂಟ್ಸ್ನೊಂದಿಗೆ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಕಾಗಿಸೊ ರಬಾಡ(856) ಹಾಗೂ ಆಸ್ಟ್ರೇಲಿಯದ ಜೋಶ್ ಹೇಝಲ್ವುಡ್(851) ಆನಂತರದ ಸ್ಥಾನದಲ್ಲಿದ್ದಾರೆ.
ಆಲ್ರೌಂಡರ್ಗಳ ರ್ಯಾಂಕಿಂಗ್ನಲ್ಲಿ 415 ಪಾಯಿಂಟ್ಸ್ನೊಂದಿಗೆ ಜಡೇಜ ಪ್ರಾಬಲ್ಯ ಸಾಧಿಸಿದ್ದಾರೆ. ಬಾಂಗ್ಲಾದೇಶದ ಮೆಹದಿ ಹಸನ್ ಮಿರಾಝ್(285) ವೆಸ್ಟ್ಇಂಡೀಸ್ ವಿರುದ್ಧ ತನ್ನ ಪ್ರದರ್ಶನದ ನಂತರ ದ್ವಿತೀಯ ಸ್ಥಾನಕ್ಕೇರಿದ್ದಾರೆ.