ಐಸಿಸಿ ಟೆಸ್ಟ್ ರ್ಯಾಂಕಿಂಗ್: ಬುಮ್ರಾ ಬದಲಿಗೆ ಅಶ್ವಿನ್ ನಂ.1 ಬೌಲರ್
ಆರನೇ ಸ್ಥಾನಕ್ಕೇರಿದ ರೋಹಿತ್
ಅಶ್ವಿನ್ | Photo: PTI
ಹೊಸದಿಲ್ಲಿ: ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತನ್ನ 100ನೇ ಟೆಸ್ಟ್ ಪಂದ್ಯದಲ್ಲಿ ಒಟ್ಟು 9 ವಿಕೆಟ್ ಗಳನ್ನು ಉರುಳಿಸಿ ಸ್ಮರಣೀಯ ಪ್ರದರ್ಶನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಐಸಿಸಿ ಬೌಲರ್ ಗಳ ರ್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ.
ಇದೇ ವೇಳೆ ಬ್ಯಾಟಿಂಗ್ ಪಟ್ಟಿಯಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಆರನೇ ಸ್ಥಾನಕ್ಕೇರಿದ್ದಾರೆ ಎಂದು ಬುಧವಾರ ಬಿಡುಗಡೆಯಾಗಿರುವ ಐಸಿಸಿ ಹೊಸ ರ್ಯಾಂಕಿಂಗ್ ನಲ್ಲಿ ತಿಳಿದುಬಂದಿದೆ.
ಇಂಗ್ಲೆಂಡ್ ವಿರುದ್ಧ ಧರ್ಮಶಾಲಾದಲ್ಲಿ ನಡೆದಿದ್ದ ಐದನೇ ಟೆಸ್ಟ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಚೆನ್ನೈ ಸ್ಪಿನ್ನರ್ ಅಶ್ವಿನ್ ಮೊದಲ ಇನಿಂಗ್ಸ್ ನಲ್ಲಿ 4 ಹಾಗೂ ಎರಡನೇ ಇನಿಂಗ್ಸ್ ನಲ್ಲಿ 5 ವಿಕೆಟ್ ಗೊಂಚಲು ಸಹಿತ 9 ನಿರ್ಣಾಯಕ ವಿಕೆಟ್ ಗಳನ್ನು ಕಬಳಿಸಿದ್ದರು.
ಅಶ್ವಿನ್ ಅವರ ಅತ್ಯಮೋಘ ಪ್ರದರ್ಶನದ ಬಲದಿಂದ ಭಾರತವು ಸರಣಿಯ ಐದನೇ ಟೆಸ್ಟ್ ಪಂದ್ಯದಲ್ಲಿ ಪ್ರಾಬಲ್ಯ ಮೆರೆದಿತ್ತು. ಈ ವರ್ಷಾರಂಭದಲ್ಲಿ ತಾನು ಹೊಂದಿದ್ದ ನಂ.1 ಬೌಲರ್ ಸ್ಥಾನವನ್ನು ಮತ್ತೆ ವಶಪಡಿಸಿಕೊಂಡಿದ್ದಾರೆ.
ನಂ.1 ಸ್ಥಾನದಲ್ಲಿದ್ದ ಜಸ್ಪ್ರೀತ್ ಬುಮ್ರಾ ಇದೀಗ ಆಸ್ಟ್ರೇಲಿಯದ ಜೋಶ್ ಹೇಝಲ್ ವುಡ್ ರೊಂದಿಗೆ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ. ಹೇಝಲ್ವುಡ್ ನ್ಯೂಝಿಲ್ಯಾಂಡ್ ವಿರುದ್ಧ 2ನೇ ಟೆಸ್ಟ್ ನಲ್ಲಿ ಆರು ವಿಕೆಟ್ ಗೊಂಚಲು ಪಡೆದಿದ್ದರು.
ಅಶ್ವಿನ್ ಅವರ ಸಹ ಆಟಗಾರ ಕುಲದೀಪ್ ಯಾದವ್ ರ್ಯಾಂಕಿಂಗ್ನಲ್ಲಿ ಮಹತ್ವದ ಸಾಧನೆ ಮಾಡಿದ್ದು 15 ಸ್ಥಾನ ಮೇಲಕ್ಕೇರಿ 16ನೇ ಸ್ಥಾನ ತಲುಪಿದ್ದಾರೆ. ಇಂಗ್ಲೆಂಡ್ ವಿರುದ್ಧ 5ನೇ ಟೆಸ್ಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕುಲದೀಪ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಉದಯೋನ್ಮುಖ ಆಟಗಾರ ಯಶಸ್ವಿ ಜೈಸ್ವಾಲ್ ಹಾಗೂ ಶುಭಮನ್ ಗಿಲ್ ರ್ಯಾಂಕಿಂಗ್ನಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ. ಜೈಸ್ವಾಲ್ ಎರಡು ಸ್ಥಾನ ಮೇಲಕ್ಕೇರಿ 8ನೇ ಸ್ಥಾನ ಪಡೆದರೆ, ಗಿಲ್ 11 ಸ್ಥಾನ ಭಡ್ತಿ ಪಡೆದು ಜೀವನಶ್ರೇಷ್ಠ 20ನೇ ಸ್ಥಾನ ಪಡೆದಿದ್ದಾರೆ.
ಆಲ್ರೌಂಡರ್ಗಳ ರ್ಯಾಂಕಿಂಗ್ನಲ್ಲಿ ಭಾರತದ ರವೀಂದ್ರ ಜಡೇಜ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಆಸ್ಟ್ರೇಲಿಯದ ಪ್ಯಾಟ್ ಕಮಿನ್ಸ್ ಹಾಗೂ ನ್ಯೂಝಿಲ್ಯಾಂಡ್ನ ಮ್ಯಾಟ್ ಹೆನ್ರಿ ಕ್ರಮವಾಗಿ 8ನೇ ಹಾಗೂ 11ನೇ ಸ್ಥಾನಕ್ಕೇರಿದ್ದಾರೆ.