ಐಸಿಸಿ ಟೆಸ್ಟ್ ರ್ಯಾಂಕಿಂಗ್ಸ್: ಅಗ್ರ ಸ್ಥಾನಕ್ಕೇರಿದ ಜೋ ರೂಟ್
ಜೋ ರೂಟ್ | PC : NDTV
ದುಬೈ, ಸೆ. 4: ಪರಿಷ್ಕೃತ ಐಸಿಸಿ ಟೆಸ್ಟ್ ಬ್ಯಾಟರ್ಗಳ ಪಟ್ಟಿಯಲ್ಲಿ ಇಂಗ್ಲೆಂಡ್ನ ತಾರಾ ಬ್ಯಾಟರ್ ಜೋ ರೂಟ್ ಅಗ್ರ ಸ್ಥಾನ ಗಳಿಸಿದ್ದಾರೆ. ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯು ಪರಿಷ್ಕೃತ ಪಟ್ಟಿಯನ್ನು ಬುಧವಾರ ಬಿಡುಗಡೆಗೊಳಿಸಿದೆ.
ಬ್ಯಾಟಿಂಗ್ನಲ್ಲಿ ಜೋ ರೂಟ್ರ ಅಮೋಘ ನಿರ್ವಹಣೆಯ ಹಿನ್ನೆಲೆಯಲ್ಲಿ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಅವರು ದೊಡ್ಡ ಅಂತರದ ಮುನ್ನಡೆಯನ್ನೂ ಗಳಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬೆನ್ನು ಬೆನ್ನಿಗೆ ರೂಟ್ ಬಾರಿಸಿರುವ ಎರಡು ಶತಕಗಳಿಂದಾಗಿ ಅವರು 922 ಅಂಕಗಳನ್ನು ಗಳಿಸಿದ್ದಾರೆ. ಹಾಗಾಗಿ, ಎರಡನೇ ಸ್ಥಾನದಲ್ಲಿರುವ ನ್ಯೂಝಿಲ್ಯಾಂಡ್ನ ಕೇನ್ ವಿಲಿಯಮ್ಸನ್ಗಿಂತ ಅವರು ಈಗ 63 ಅಂಕಗಳ ಮುನ್ನಡೆಯಲ್ಲಿದ್ದಾರೆ.
ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿರುವ ಇಂಗ್ಲೆಂಡ್ನವರೇ ಆದ ಗಸ್ ಆ್ಯಟ್ಕಿನ್ಸನ್, ಆಲ್ರೌಂಡರ್ಗಳ ಪಟ್ಟಿಯಲ್ಲಿ 48 ಸ್ಥಾನಗಳನ್ನು ಜಿಗಿದು ಅಗ್ರ 20ರ ಸ್ಥಾನಕ್ಕೆ ಏರಿದ್ದಾರೆ ಮತ್ತು ಬೌಲರ್ಗಳ ಪಟ್ಟಿಯಲ್ಲಿ ಅಗ್ರ 30ರಲ್ಲಿ ಸ್ಥಾನ ಪಡೆದಿದ್ದಾರೆ.
ಶ್ರೀಲಂಕಾದ ಕಮಿಂಡು ಮೆಂಡಿಸ್ 11 ಸ್ಥಾನ ಮೇಲಕ್ಕೇರಿ ಬ್ಯಾಟರ್ಗಳ ಪಟ್ಟಿಯಲ್ಲಿ 25ನೇ ಸ್ಥಾನ ಗಳಿಸಿದ್ದಾರೆ. ಬೌಲರ್ಗಳ ಪಟ್ಟಿಯಲ್ಲಿ ಅಸಿತ ಫೆರ್ನಾಂಡೊ ಮೊದಲ ಬಾರಿಗೆ ಅಗ್ರ 10ರ ಸ್ಥಾನಕ್ಕೆ ಏರಿದ್ದಾರೆ. ಅವರು ಈಗ 8ನೇ ಸ್ಥಾನದಲ್ಲಿದ್ದಾರೆ.
ಬ್ಯಾಟರ್ಗಳ ರ್ಯಾಂಕಿಂಗ್ನಲ್ಲಿ, ಬಾಂಗ್ಲಾದೇಶದ ಲಿಟನ್ ದಾಸ್ 12 ಸ್ಥಾನಗಳನ್ನು ಜಿಗಿದು 15ನೇ ಸ್ಥಾನಕ್ಕೆ ಏರಿದ್ದಾರೆ. ಅವರು ಪಾಕಿಸ್ತಾನ ವಿರುದ್ಧದ ಎರಡನೇ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ ಅಮೂಲ್ಯ 138 ರನ್ಗಳನ್ನು ಗಳಿಸಿ ತಂಡವನ್ನು ಅಪಾಯದಿಂದ ಪಾರುಮಾಡಿದ್ದರು.