ಐಸಿಸಿ ಟೆಸ್ಟ್ ರ್ಯಾಂಕಿಂಗ್ | ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿ 10ನೇ ಸ್ಥಾನಕ್ಕೇರಿದ ಟೆಂಬಾ ಬವುಮಾ
ವಿರಾಟ್ ಕೊಹ್ಲಿ | PC : PTI
ದುಬೈ: ಶ್ರೀಲಂಕಾದ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ 70 ಹಾಗೂ 113 ರನ್ ಗಳಿಸಿರುವ ದಕ್ಷಿಣ ಆಫ್ರಿಕಾದ ನಾಯಕ ಟೆಂಬಾ ಬವುಮಾ ಅವರು 14 ಸ್ಥಾನ ಭಡ್ತಿ ಪಡೆದು ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ 10ನೇ ಸ್ಥಾನ ಪಡೆದು ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ತಂಡವು 233 ರನ್ ಅಂತರದಿಂದ ಜಯ ಸಾಧಿಸಿದ ನಂತರ ಬವುಮಾ ರ್ಯಾಂಕಿಂಗ್ನಲ್ಲಿ ಪ್ರಗತಿ ಸಾಧಿಸಿದ್ದಾರೆ.
ಬವುಮಾ ಜೀವನಶ್ರೇಷ್ಠ ರ್ಯಾಂಕ್ ತಲುಪುವ ಮೂಲಕ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದರು. ಪರ್ತ್ನಲ್ಲಿ ಆಸ್ಟ್ರೇಲಿಯದ ವಿರುದ್ಧ ಶತಕ ದಾಖಲಿಸಿದ ಹೊರತಾಗಿಯೂ ಕೊಹ್ಲಿ ಅವರು 14ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಇಂಗ್ಲೆಂಡ್ ಬ್ಯಾಟರ್ ಜೋ ರೂಟ್ 895 ರೇಟಿಂಗ್ ಪಾಯಿಂಟ್ಸ್ನೊಂದಿಗೆ ರ್ಯಾಂಕಿಂಗ್ನಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ. 854 ಪಾಯಿಂಟ್ಸ್ ಗಳಿಸಿರುವ ಇಂಗ್ಲೆಂಡ್ನ ಇನ್ನೋರ್ವ ಆಟಗಾರ ಹ್ಯಾರಿ ಬ್ರೂಕ್ ಆ ನಂತರದ ಸ್ಥಾನದಲ್ಲಿದ್ದಾರೆ.
ಕ್ರೈರ್ಸ್ಟ್ಚರ್ಚ್ನಲ್ಲಿ ನ್ಯೂಝಿಲ್ಯಾಂಡ್ ತಂಡದ ವಿರುದ್ಧ ಇಂಗ್ಲೆಂಡ್ ತಂಡ 8 ವಿಕೆಟ್ಗಳ ಅಂತರದಿಂದ ಜಯ ಸಾಧಿಸಿದ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 171 ರನ್ ಗಳಿಸಿದ್ದ ಬ್ರೂಕ್ 2ನೇ ಸ್ಥಾನ ಭಡ್ತಿ ಪಡೆದಿದ್ದಾರೆ.
ಬ್ರೂಕ್ ಅವರು ರ್ಯಾಂಕಿಂಗ್ನಲ್ಲಿ ಏರಿಕೆ ಕಂಡ ಕಾರಣ ಭಾರತದ ಯುವ ಸ್ಟಾರ್ ಬ್ಯಾಟರ್ ಯಶಸ್ವಿ ಜೈಸ್ವಾಲ್ ಹೊಸ ರ್ಯಾಂಕಿಂಗ್ನಲ್ಲಿ 4ನೇ ಸ್ಥಾನಕ್ಕೆ ಕುಸಿದಿದ್ದಾರೆ.
ದಕ್ಷಿಣ ಆಫ್ರಿಕಾದ ಮಾರ್ಕೊ ಜಾನ್ಸನ್ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ನಂತರ ಟೆಸ್ಟ್ ಬೌಲರ್ಗಳು ಹಾಗೂ ಆಲ್ರೌಂಡರ್ಗಳ ಐಸಿಸಿ ರ್ಯಾಂಕಿಂಗ್ನಲ್ಲಿ ಗಮನಾರ್ಹ ಬದಲಾವಣೆಯಾಗಿದೆ.
ಮೊದಲ ಇನಿಂಗ್ಸ್ನಲ್ಲಿ 13 ರನ್ಗೆ 7 ವಿಕೆಟ್ಗಳ ಸಹಿತ ಒಟ್ಟು 11 ವಿಕೆಟ್ಗಳನ್ನು ಉರುಳಿಸಿದ್ದ ಜಾನ್ಸನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಬೌಲಿಂಗ್ ಹಾಗೂ ಆಲ್ರೌಂಡರ್ ವಿಭಾಗಗಳಲ್ಲಿ ಜೀವನಶ್ರೇಷ್ಠ ರೇಟಿಂಗ್ ಪಡೆದಿದ್ದಾರೆ.
ಎಡಗೈ ಲಂಬೂ ವೇಗಿ ಜಾನ್ಸನ್ 19 ಸ್ಥಾನ ಮೇಲಕ್ಕೇರಿ ಬೌಲರ್ಗಳ ರ್ಯಾಂಕಿಂಗ್ನಲ್ಲಿ 9ನೇ ಸ್ಥಾನ ತಲುಪಿದ್ದಾರೆ. 10 ಸ್ಥಾನಗಳಲ್ಲಿ ಭಡ್ತಿ ಪಡೆದು ಆಲ್ರೌಂಡರ್ಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ.
ಭಾರತದ ಜಸ್ಪ್ರಿತ್ ಬುಮ್ರಾ ಹಾಗೂ ರವೀಂದ್ರ ಜಡೇಜ ಅವರು ಬೌಲರ್ಗಳ ಹಾಗೂ ಆಲ್ರೌಂಡರ್ಗಳ ರ್ಯಾಂಕಿಂಗ್ನಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ.