ಐಸಿಸಿ ಮಹಿಳೆಯರ ಏಕದಿನ ರ್ಯಾಂಕಿಂಗ್ | ಅಗ್ರ 20ರ ಸ್ಥಾನಕ್ಕೇರಿದ ಜೆಮಿಮಾ ರೊಡ್ರಿಗಸ್
ಜೆಮಿಮಾ ರೊಡ್ರಿಗಸ್ | PC : PTI
ದುಬೈ : ಭಾರತೀಯ ಮಧ್ಯಮ ಸರದಿಯ ಬ್ಯಾಟರ್ ಜೆಮಿಮಾ ರೊಡ್ರಿಗಸ್ ಐಸಿಸಿ ಮಹಿಳೆಯರ ಏಕದಿನ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ 20ರ ಸ್ಥಾನಕ್ಕೆ ಏರಿದ್ದಾರೆ. ತನ್ನ ಚೊಚ್ಚಲ ಅಂತರರಾಷ್ಟ್ರೀಯ ಶತಕದ ನೆರವಿನಿಂದ ಮೂರು ಸ್ಥಾನಗಳನ್ನು ಜಿಗಿದ ಅವರು 19ನೇ ಸ್ಥಾನದಲ್ಲಿ ನೆಲೆಸಿದ್ದಾರೆ.
24 ವರ್ಷದ ಜೆಮಿಮಾ, ರಾಜ್ಕೋಟ್ನಲ್ಲಿ ಇತ್ತೀಚೆಗೆ ನಡೆದ ಐರ್ಲ್ಯಾಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 102 ರನ್ ಬಾರಿಸಿದ್ದರು. ಆ ಮೂಲಕ ಶತಕವೊಂದಕ್ಕಾಗಿ ಏಳು ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿದರು. ಅವರ ಶತಕದ ನೆರವಿನಿಂದ ಭಾರತವು 370 ರನ್ಗಳನ್ನು ಕಲೆ ಹಾಕಿತ್ತು. ಇದು ಏಕದಿನ ಇನಿಂಗ್ಸ್ ಒಂದರಲ್ಲಿ ಭಾರತದ ಗರಿಷ್ಠ ಮೊತ್ತವಾಗಿದೆ.
ಭಾರತವು ಆ ಪಂದ್ಯವನ್ನು 116 ರನ್ಗಳಿಂದ ಗೆದ್ದು ಮೂರು ಪಂದ್ಯಗಳ ಸರಣಿಯಲ್ಲಿ 2-0 ಅಂತರದ ಅಭೇದ್ಯ ಮುನ್ನಡೆ ಗಳಿಸಿದೆ.
ಜೆಮಿಮಾ ಈಗ 563 ರ್ಯಾಂಕಿಂಗ್ ಅಂಕಗಳೊಂದಿಗೆ ಅಗ್ರ 20ರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಸ್ಮತಿ ಮಂದಾನ 723 ರ್ಯಾಂಕಿಂಗ್ ಅಂಕಗಳೊಂದಿಗೆ ತನ್ನ ಮೂರನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಮೊದಲನೇ ಸ್ಥಾನವನ್ನು ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್ ಲಾರಾ ವೊಲ್ವಾರ್ಟ್ (773) ಉಳಿಸಿಕೊಂಡಿದ್ದರೆ, ಶ್ರೀಲಂಕಾದ ಚಮರಿ ಅತಪತ್ತು (733) ಎರಡನೇ ಸ್ಥಾನವನ್ನು ಆಕ್ರಮಿಸಿದ್ದಾರೆ.