ನಾಳೆಯಿಂದ ಐಸಿಸಿ ಮಹಿಳೆಯರ ಟಿ-20 ವಿಶ್ವಕಪ್ ಆರಂಭ
ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ-ಸ್ಕಾಟ್ಲ್ಯಾಂಡ್ ಸೆಣಸಾಟ
PC : BCC
ಶಾರ್ಜಾ : ಐಸಿಸಿ ಮಹಿಳೆಯರ ಟಿ-20 ವಿಶ್ವಕಪ್ ಪಂದ್ಯಾವಳಿಯು ಅ.3ರಿಂದ ಶಾರ್ಜಾ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಆರಂಭವಾಗಲಿದ್ದು, ಅಕ್ಟೋಬರ್ 20ರಂದು ಇದೇ ನಗರದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಗುರುವಾರ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ರಾಷ್ಟ್ರ ಬಾಂಗ್ಲಾದೇಶವು ಸ್ಕಾಟ್ಲ್ಯಾಂಡ್ ತಂಡವನ್ನು ಎದುರಿಸಲಿದೆ.
ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ 10 ಕ್ರಿಕೆಟ್ ತಂಡಗಳ ನಾಯಕಿಯರು ದುಬೈನಲ್ಲಿ ಭೇಟಿಯಾಗುವ ಮೂಲಕ ಟೂರ್ನಿಗೆ ಚಾಲನೆ ನೀಡಲಿದ್ದಾರೆ. ಬಾಂಗ್ಲಾದೇಶದಲ್ಲಿ ನಡೆಯಬೇಕಾಗಿದ್ದ ವಿಶ್ವಕಪ್ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲಾಗಿದೆ.
ಹಾಲಿ ಚಾಂಪಿಯನ್ ಆಸ್ಟ್ರೇಲಿಯ ಕ್ರಿಕೆಟ್ ತಂಡವು ಇಂಗ್ಲೆಂಡ್ ಹಾಗೂ ವೆಸ್ಟ್ಇಂಡೀಸ್ ವಿರುದ್ಧ ಆಡಿರುವ ಎರಡೂ ಅಭ್ಯಾಸ ಪಂದ್ಯಗಳನ್ನು ಗೆದ್ದುಕೊಂಡಿದೆ. ಎ ಗುಂಪಿನಲ್ಲಿ ಆಸ್ಟ್ರೇಲಿಯ ತಂಡವಲ್ಲದೆ, ಭಾರತ, ನ್ಯೂಝಿಲ್ಯಾಂಡ್, ಪಾಕಿಸ್ತಾನ ಹಾಗೂ ಏಶ್ಯಕಪ್ ಚಾಂಪಿಯನ್ಸ್ ಶ್ರೀಲಂಕಾ ತಂಡಗಳಿವೆ.
ಎ ಗುಂಪಿನ ಪ್ರಬಲ ಸ್ಪರ್ಧಿಯಾಗಿರುವ ಭಾರತವು ಈ ಬಾರಿ ಐಸಿಸಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ. 2020 ಟಿ-20 ವಿಶ್ವಕಪ್ ಹಾಗೂ, 2005 ಹಾಗೂ 2017ರ 50 ಓವರ್ ಪಂದ್ಯಾವಳಿಗಳಲ್ಲಿ ಭಾರತವು ರನ್ನರ್ಸ್ ಅಪ್ ಆಗಿತ್ತು.
ವಿಶ್ವದ 3ನೇ ರ್ಯಾಂಕಿನ ತಂಡವಾಗಿ ಟೂರ್ನಿಗೆ ಪ್ರವೇಶಿಸಿರುವ ಹರ್ಮನ್ಪ್ರೀತ್ ಕೌರ್ ಬಳಗವು ಹಿಂದಿನ 3 ಐಸಿಸಿ ಮಹಿಳೆಯರ ಟಿ20 ವಿಶ್ವಕಪ್ಗಳಲ್ಲಿ ಸೆಮಿ ಫೈನಲ್ಗೆ ತಲುಪಿದೆ.
ಬಿ ಗುಂಪಿನಲ್ಲಿ ಅಗ್ರ ರ್ಯಾಂಕಿನ ತಂಡ ಇಂಗ್ಲೆಂಡ್, ಬಾಂಗ್ಲಾದೇಶ, ವೆಸ್ಟ್ಇಂಡೀಸ್, ದಕ್ಷಿಣ ಆಫ್ರಿಕಾ ಹಾಗೂ ಸ್ಕಾಟ್ಲ್ಯಾಂಡ್ ತಂಡಗಳಿವೆ.
ವಿಶ್ವಕಪ್ ಟೂರ್ನಿಯು 18 ದಿನಗಳ ಕಾಲ ದುಬೈ ಹಾಗೂ ಶಾರ್ಜಾ ನಗರಗಳಲ್ಲಿ ನಡೆಯಲಿದ್ದು, ಒಟ್ಟು 23 ಪಂದ್ಯಗಳು ನಡೆಯಲಿವೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯವು 7ನೇ ಬಾರಿ ಮಹಿಳೆಯರ ಟಿ20 ವಿಶ್ವಕಪ್ ಪ್ರಶಸ್ತಿ ಗೆಲ್ಲುವತ್ತ ಚಿತ್ತ ಹರಿಸಿದೆ.
ವಿಶ್ವಕಪ್ನಲ್ಲಿ ಭಾರತದ ವೇಳಾಪಟ್ಟಿ
ಅ.4: ಭಾರತ-ನ್ಯೂಝಿಲ್ಯಾಂಡ್, ಸಮಯ: ರಾತ್ರಿ 7:30
ಅ.6: ಭಾರತ-ಪಾಕಿಸ್ತಾನ, ಸಮಯ: ಮಧ್ಯಾಹ್ನ 3:30
ಅ.9: ಭಾರತ-ಶ್ರೀಲಂಕಾ, ಸಮಯ: ರಾತ್ರಿ 7:30
ಅ.13: ಭಾರತ-ಆಸ್ಟ್ರೇಲಿಯ, ಸಮಯ: ರಾತ್ರಿ 7:30