ಧೋನಿ ನಿವೃತ್ತರಾದರೆ, ರೋಹಿತ್ ಶರ್ಮ ಸಿ ಎಸ್ ಕೆ ನಾಯಕನೂ ಆಗಬಹುದು : ಅಂಬಾಟಿ ರಾಯುಡು
ಧೋನಿ , ರೋಹಿತ್ ಶರ್ಮ |Photo: X
ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುವುದು ಹಾರ್ದಿಕ್ ಪಾಂಡ್ಯಗೆ ಕಠಿಣ ಕಾರ್ಯವಾಗಲಿದೆ ಎಂದು ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ಅಭಿಪ್ರಾಯಪಟ್ಟಿದ್ದಾರೆ. ಯಾಕೆಂದರೆ, ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ನ ವ್ಯವಸ್ಥೆಗಳು ಬೇರೆ ಬೇರೆಯಾಗಿವೆ ಎಂದು ಅವರು ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡಿರುವ ರಾಯುಡು ‘ನ್ಯೂಸ್24’ ಚಾನೆಲ್ ನೊಂದಿಗೆ ಮಾತನಾಡುತ್ತಿದ್ದರು. ಅವರು ಈಗ ಅಂತರರಾಷ್ಟ್ರೀಯ ಕ್ರಿಕೆಟ್ ಮತ್ತು ಐಪಿಎಲ್ ನಿಂದ ನಿವೃತ್ತಿಯಾಗಿದ್ದಾರೆ.
ಕಳೆದ ವರ್ಷ ಅವರು ಚೆನ್ನೈ ತಂಡದ ಪರವಾಗಿ ಐಪಿಎಲ್ ನಲ್ಲಿ ಆಡಿದ್ದರು. ಅಂದು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ತಂಡವು ಫೈನಲ್ ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದಿತ್ತು.
ಹದಿನೇಳನೇ ವರ್ಷದ ಐಪಿಎಲ್ ಪಂದ್ಯಾವಳಿಯು ಮಾರ್ಚ್ 22ರಂದು ಚೆನ್ನೈನಲ್ಲಿ ಆರಂಭಗೊಳ್ಳಲಿದೆ. ಅಂದು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವನ್ನು ಎದುರಿಸಲಿದೆ.
ಈ ಬಾರಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ರೋಹಿತ್ ಶರ್ಮರಿಂದ ಹಾರ್ದಿಕ್ ಪಾಂಡ್ಯ ವಹಿಸಿಕೊಂಡಿದ್ದಾರೆ.
ಅಂಬಾಟಿ ರಾಯುಡು, ರೋಹಿತ ಶರ್ಮ ಬಗ್ಗೆಯೂ ಮಾತನಾಡಿದ್ದಾರೆ.
‘‘ಪಾಂಡ್ಯ ಒಂದು ವರ್ಷ ಮುಂಬೈ ಇಂಡಿಯನ್ಸ್ ನಲ್ಲಿ ಆಡಿ, ಬಳಿಕ ನಾಯಕತ್ವ ವಹಿಸಿಕೊಳ್ಳಬೇಕಾಗಿತ್ತು. ಯಾಕೆಂದರೆ, ರೋಹಿತ್ ಶರ್ಮ ಈಗಲೂ ಭಾರತ ತಂಡದ ನಾಯಕನಾಗಿದ್ದಾರೆ’’ ಎಂದು ರಾಯುಡು ಅಭಿಪ್ರಾಯಪಟ್ಟರು.
ಚೆನ್ನೈ ಸೂಪರ್ ಕಿಂಗ್ಸ್ ಧಿರಿಸಿನಲ್ಲಿ ರೋಹಿತ್ ರನ್ನು ನೋಡುವ ಬಯಕೆಯನ್ನು ರಾಯುಡು ವ್ಯಕ್ತಪಡಿಸಿದರು.
‘‘ರೋಹಿತ್ ಶರ್ಮ ಇನ್ನೂ 5-6 ವರ್ಷ ಐಪಿಎಲ್ ಆಡಬಹುದು. ಅವರು ನಾಯಕತ್ವ ವಹಿಸಬೇಕೆಂದು ಬಯಸಿದರೆ, ಇಡೀ ಜಗತ್ತೇ ಅವರಿಗೆ ತೆರೆದುಕೊಂಡಿದೆ. ಎಲ್ಲಿ ಬೇಕಾದರೂ ಅವರು ಸುಲಭವಾಗಿ ನಾಯಕತ್ವ ವಹಿಸಬಹುದು’’ ಎಂದರು.
‘‘2025ರಲ್ಲಿ ಸಿ ಎಸ್ ಕೆ ಪರವಾಗಿ ರೋಹಿತ್ ಶರ್ಮ ಆಡಬೇಕೆಂದು ನಾನು ಬಯಸುತ್ತೇನೆ. ಆಗ ಧೋನಿ ನಿವೃತ್ತರಾದರೆ, ಅವರು ತಂಡದ ನಾಯಕತ್ವವನ್ನೂ ವಹಿಸಬಹುದು’’ ಎಂದು ಅಂಬಾಟಿ ರಾಯುಡು ನುಡಿದರು.