ಇಂಪ್ಯಾಕ್ಟ್ ಪ್ಲೇಯರ್ ನಿಯಮ ಪಂದ್ಯದ ಸಮತೋಲನಕ್ಕೆ ಭಂಗ ತಂದಿದೆ: ವಿರಾಟ್ ಕೊಹ್ಲಿ ಟೀಕೆ
ವಿರಾಟ್ ಕೊಹ್ಲಿ | PC : PTI
ಹೊಸದಿಲ್ಲಿ: ಭಾರತದ ಪ್ರಮುಖ ಬ್ಯಾಟರ್ ವಿರಾಟ್ ಕೊಹ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಟೀಕಿಸಿದ್ದು, ಇದು ಪಂದ್ಯದ ಸಮತೋಲನಕ್ಕೆ ಭಂಗ ತರುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ರೋಹಿತ್ ಶರ್ಮಾರ ಅಭಿಪ್ರಾಯಕ್ಕೆ ಧ್ವನಿಗೂಡಿಸಿದ್ದಾರೆ.
ಈ ಹಿಂದಿನ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ಪರಿಚಯಿಸಲ್ಪಟ್ಟಿರುವ ಈ ನಿಯಮದ ಮರುಮೌಲ್ಯ ಮಾಪನ ಮಾಡುವ ಅಗತ್ಯವಿದೆ ಎಂದು ಕೊಹ್ಲಿ ಒತ್ತಿ ಹೇಳಿದರು.
ನಾನು ಈ ನಿಯಮದ ದೊಡ್ಡ ಅಭಿಮಾನಿಯಲ್ಲ. ಇದು ಆಲ್ರೌಂಡರ್ಗಳಿಗೆ ಮಾರಕವಾಗಿದೆ. ಕ್ರಿಕೆಟ್ ಆಡುವವರು 11ಮಂದಿಯೇ ಹೊರತು 12 ಆಟಗಾರರಲ್ಲ ಎಂದು ರೋಹಿತ್ ಶರ್ಮಾ ಈಗಾಗಲೇ ಇಂಪ್ಯಾಕ್ಟ್ ನಿಯಮದ ಬಗ್ಗೆ ತನ್ನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹಲವು ಬಾರಿ ದೊಡ್ಡ ಮೊತ್ತದ ಪಂದ್ಯಗಳು ನಡೆದಿದ್ದು, 8 ಬಾರಿ 250ಕ್ಕೂ ಅಧಿಕ ರನ್ ದಾಖಲಾಗಿದ್ದವು. ಪಂಜಾಬ್ ಕಿಂಗ್ಸ್ ತಂಡ ಟಿ20 ಇತಿಹಾಸದಲ್ಲಿ ಅತ್ಯಂತ ಹೆಚ್ಚು ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದೆ. ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 262 ರನ್ ಗುರಿಯನ್ನು 8 ಎಸೆತಗಳು ಬಾಕಿ ಇರುವಾಗಲೇ ಬೆನ್ನಟ್ಟಿತ್ತು. ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಕ್ರಿಕೆಟ್ನಲ್ಲಿ ಅತ್ಯಂತ ಗರಿಷ್ಠ ಸ್ಕೋರ್ ದಾಖಲಿಸಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 3 ವಿಕೆಟ್ಗಳ ನಷ್ಟಕ್ಕೆ 287 ರನ್ ಗಳಿಸಿತ್ತು.
ಇಂತಹ ಬ್ಯಾಟಿಂಗ್ ಪ್ರಾಬಲ್ಯದ ವಾತಾವರಣದಲ್ಲಿ ಬೌಲರ್ಗಳ ಹೋರಾಟದ ಬಗ್ಗೆ ಕೊಹ್ಲ್ಲಿ ಅನುಕಂಪ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್ನಲ್ಲಿ ಬ್ಯಾಟ್ ಹಾಗೂ ಬಾಲ್ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವ ಮಹತ್ವವನ್ನು ಕೊಹ್ಲಿ ಒತ್ತಿ ಹೇಳಿದ್ದಾರೆ. ಸಾಧಾರಣ ಮೊತ್ತವನ್ನು ಉಳಿಸಿಕೊಳ್ಳುವ ಸಾಮರ್ಥ್ಯದಲ್ಲಿ ಆಟದ ಸೌಂದರ್ಯ ಅಡಗಿದೆ ಎಂದು ವಾದಿಸಿದ್ದಾರೆ.