ಭಾರತ ವಿರುದ್ಧದ ಕೊನೆಯ ಟೆಸ್ಟ್: ಆಸೀಸ್ ತಂಡದಲ್ಲಿ ಮಹತ್ವದ ಬದಲಾವಣೆ
(ANI Photo)
ಸಿಡ್ನಿ: ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯ ಕೊನೆಯ ಪಂದ್ಯದಲ್ಲಿ ಪ್ರವಾಸಿ ಭಾರತ ವಿರುದ್ಧ ಮೈದಾನಕ್ಕೆ ಇಳಿಯುವ ಆಸ್ಟ್ರೇಲಿಯಾ ತಂಡದಲ್ಲಿ ಹಲವು ಮಹತ್ವದ ಬದಲಾವಣೆಯನ್ನು ನಾಯಕ ಪ್ಯಾಟ್ ಕಮಿನ್ಸ್ ಪ್ರಕಟಿಸಿದ್ದಾರೆ. ಯುವ ಆಟಗಾರ ಬೆವು ವೆಬ್ಸ್ಟರ್ ಚೊಚ್ಚಲ ಟೆಸ್ಟ್ ಆಡುವುದನ್ನು ಅವರು ದೃಢಪಡಿಸಿದ್ದಾರೆ.
ವೆಬ್ಸ್ಟರ್ ಆಸ್ಟ್ರೇಲಿಯಾ ಪರ ಟೆಸ್ಟ್ ಆಡಿದ 469ನೇ ಆಟಗಾರ ಎನಿಸಲಿದ್ದಾರೆ. ಇಡೀ ಸರಣಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಲು ವಿಫಲರಾದ ಮಿಚ್ ಮಾರ್ಷ್ ಅವರ ಸ್ಥಾನವನ್ನು ವೆಬ್ಸ್ಟರ್ ತುಂಬಲಿದ್ದಾರೆ. ಮಾರ್ಷ್ ಸರಣಿಯ ನಾಲ್ಕು ಪಂದ್ಯಗಳಲ್ಲಿ 10.42 ಸರಾಸರಿಯೊಂದಿಗೆ ಕೇವಲ 73 ರನ್ ಗಳಿಸಿದ್ದಾರೆ. ಆದ್ದರಿಂದ ಅಗ್ರ ಆರು ಬ್ಯಾಟ್ಸ್ಮನ್ಗಳ ಸಾಲಿನಲ್ಲಿ ವೆಬ್ಸ್ಟರ್ ಸ್ಥಾನ ಪಡೆಯಲಿದ್ದಾರೆ.
ಸರಣಿಯಲ್ಲಿ 2-1 ಮುನ್ನಡೆಯಲ್ಲಿರುವ ಆಸ್ಟ್ರೇಲಿಯಾ ಸಿಡ್ನಿ ಮೈದಾನದಲ್ಲಿ ಹೊಸ ವರ್ಷಕ್ಕೆ ಹೊಸ ಹುರುಪಿನೊಂದಿಗೆ ಪ್ರದರ್ಶನ ನೀಡಲಿದೆ. ಪ್ರಥಮದರ್ಜೆ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ವೆಬ್ಸ್ಟರ್ ಆಲ್ರೌಂಡರ್ ಆಗಿ ಆಸ್ಟ್ರೇಲಿಯಾ ತಂಡಕ್ಕೆ ಮಹತ್ವದ ಕೊಡುಗೆ ನೀಡುತ್ತಾರೆ ಎಂಬ ವಿಶ್ವಾಸವನ್ನು ಪಂದ್ಯಕ್ಕೆ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಮಿನ್ಸ್ ವ್ಯಕ್ತಪಡಿಸಿದರು. ಗಾಯದ ಸಮಸ್ಯೆ ಹೊರತಾಗಿಯೂ ಮಿಚೆಲ್ ಸ್ಟಾರ್ಕ್ ಸಿಡ್ನಿ ಪಂದ್ಯದಲ್ಲಿ ಮೈದಾನಕ್ಕೆ ಇಳಿಯಲಿದ್ದಾರೆ.