ಏಕೈಕ ಟೆಸ್ಟ್: ಆಸ್ಟ್ರೇಲಿಯ ವಿರುದ್ಧ ಐತಿಹಾಸಿಕ ಜಯ ದಾಖಲಿಸಿದ ಭಾರತದ ಮಹಿಳಾ ಕ್ರಿಕೆಟ್ ತಂಡ
Photo : twitter
ಮುಂಬೈ: ಭಾರತದ ಮಹಿಳಾ ಕ್ರಿಕೆಟ್ ತಂಡ ಬಲಿಷ್ಠ ಆಸ್ಟ್ರೇಲಿಯ ವಿರುದ್ಧ ಮೊತ್ತ ಮೊದಲ ಬಾರಿ ಟೆಸ್ಟ್ ಪಂದ್ಯವನ್ನು ಜಯಿಸಿ ಐತಿಹಾಸಿಕ ಸಾಧನೆ ಮಾಡಿದೆ. 28 ವರ್ಷಗಳ ನಂತರ ತವರಿನಲ್ಲಿ ಟೆಸ್ಟ್ ಕ್ರಿಕೆಟ್ ಆಡಿದ ಭಾರತ ಸ್ಮರಣೀಯ ಸಾಧನೆ ಮಾಡಿದೆ.
ಏಕೈಕ ಟೆಸ್ಟ್ನ ನಾಲ್ಕನೇ ದಿನದಾಟವಾದ ರವಿವಾರ ಭಾರತದ ವನಿತೆಯರ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಅಮೋಘ ಪ್ರದರ್ಶನ ನೀಡಿದೆ. ವಿಶ್ವದ ಬಲಿಷ್ಠ ತಂಡದ ಎದುರು ತನ್ನ ಪ್ರಾಬಲ್ಯ ಮೆರೆದು 8 ವಿಕೆಟ್ಗಳ ಜಯ ಸಾಧಿಸಿದೆ.
ಶನಿವಾರ ದಿನದಾಟದಂತ್ಯಕ್ಕೆ 2ನೇ ಇನಿಂಗ್ಸ್ನಲ್ಲಿ 5 ವಿಕೆಟ್ ನಷ್ಟಕ್ಕೆ 233 ರನ್ ಗಳಿಸಿದ್ದ ಆಸ್ಟ್ರೇಲಿಯ ಇಂದು 28 ರನ್ ಗಳಿಸುವಷ್ಟರಲ್ಲಿ ಉಳಿದ 5 ವಿಕೆಟ್ಗಳನ್ನು ಕಳೆದುಕೊಂಡಿತು. ಗೆಲ್ಲಲು 75 ರನ್ ಗುರಿ ಪಡೆದ ಭಾರತ ತಂಡ ನಿರಾಯಾಸವಾಗಿ ಜಯದ ನಗು ಬೀರಿತು. ಸ್ಮೃತಿ ಮಂಧಾನ ಔಟಾಗದೆ 38 ರನ್ ಹಾಗೂ ಜೆಮಿಮಾ ರೊಡ್ರಿಗಸ್ ಔಟಾಗದೆ 12 ರನ್ ಗಳಿಸಿ ವಿಶ್ವ ಶ್ರೇಷ್ಠ ತಂಡದ ವಿರುದ್ಧದ ಜಯ ಸಂಭ್ರಮಿಸಿದರು.
1995ರ ನಂತರ ಮೊದಲ ಬಾರಿ ತಾಯ್ನಾಡಿನಲ್ಲಿ ಒಂದಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯವನ್ನು ಆಡಿರುವ ಭಾರತದ ಮಹಿಳಾ ತಂಡ ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆಯಿತು. ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ನಂತಹ ಬಲಿಷ್ಠ ಎದುರಾಳಿಗಳೆದುರು ಧನಾತ್ಮಕ ಕ್ರಿಕೆಟ್ ಆಡಿ ತನ್ನ ಭರವಸೆ ಉಳಿಸಿಕೊಂಡಿತು.
ಭಾರತ ತಂಡ ಮುಂಬೈನ ವಾಂಖೆಡೆ ಸ್ಟೇಡಿಯಮ್ ಹಾಗೂ ನವಿ ಮುಂಬೈನ ಡಿ.ವೈ. ಪಾಟೀಲ್ ಸ್ಟೇಡಿಯಮ್ನಲ್ಲಿ ನಡೆದಿರುವ ಕ್ರಮವಾಗಿ ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ಎದುರಿನ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿದೆ. ಇಂಗ್ಲೆಂಡ್ ವಿರುದ್ಧ ಭಾರೀ ಅಂತರದ ರನ್ನಿಂದ ಜಯ ಸಾಧಿಸಿರುವ ಹರ್ಮನ್ಪ್ರೀತ್ ಕೌರ್ ಬಳಗವು ಆಸ್ಟ್ರೇಲಿಯ ವಿರುದ್ಧ ಆಡಿರುವ 11 ಟೆಸ್ಟ್ ಪಂದ್ಯಗಳಲ್ಲಿ ಮೊದಲ ಬಾರಿ ಜಯ ದಾಖಲಿಸಿದೆ.
ಈ ತನಕ ಒಟ್ಟು 40 ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ಭಾರತದ ಮಹಿಳಾ ತಂಡವು ಇದೀಗ ಏಳನೇ ಬಾರಿ ಜಯ ಗಳಿಸಿತು. ಆರು ಬಾರಿ ಸೋತಿರುವ ಭಾರತದ ಮಹಿಳೆಯರು 27 ಪಂದ್ಯಗಳಲ್ಲಿ ಡ್ರಾ ಸಾಧಿಸಿದ್ದಾರೆ. ಟೆಸ್ಟ್ ಮಾದರಿ ಕ್ರಿಕೆಟ್ನಲ್ಲಿ ತಂಡದ ಅತ್ಯುತ್ತಮ ಪ್ರದರ್ಶನವು ಭವಿಷ್ಯದಲ್ಲಿ ತಾಯ್ನಾಡಿನಲ್ಲಿ ಮತ್ತಷ್ಟು ಟೆಸ್ಟ್ ಪಂದ್ಯವನ್ನಾಡುವ ಸೂಚನೆ ನೀಡಿದೆ.
ಆಸ್ಟ್ರೇಲಿಯ ವಿರುದ್ಧ ಗೆಲುವಿನೊಂದಿಗೆ ಭಾರತ ತಂಡದಲ್ಲಿ 20ರ ಹರೆಯದ ರಿಚಾ ಘೋಷ್ರಂತಹ ಹೊಸ ತಾರೆಯರು ಉದಯಿಸಿದ್ದಾರೆ. ರಿಚಾ ಪಾದಾರ್ಪಣೆ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 52 ರನ್ ಗಳಿಸಿದ್ದರು. ಇಂಗ್ಲೆಂಡ್ ವಿರುದ್ಧ ಕಳೆದ ವಾರ ನಡೆದಿದ್ದ ಪಂದ್ಯದಲ್ಲಿ ಜೆಮಿಮಾ ರೊಡ್ರಿಗಸ್, ಶುಭಾ ಸತೀಶ್ ಹಾಗೂ ರೇಣುಕಾ ಸಿಂಗ್ ಠಾಕೂರ್ರಂತಹ ಟೆಸ್ಟ್ ಕ್ರಿಕೆಟ್ನ ಹೊಸ ಪ್ರತಿಭೆಗಳನ್ನು ಕ್ರಿಕೆಟ್ ಜಗತ್ತು ಕಂಡಿತ್ತು.
ನಾಲ್ಕನೇ ದಿನದಾಟದಲ್ಲಿ ಭಾರತೀಯ ಸ್ಪಿನ್ನರ್ಗಳು ಪಾರಮ್ಯ ಮೆರೆದರು. ಸ್ನೇಹ್ ರಾಣಾ(4-63), ರಾಜೇಶ್ವರಿ ಗಾಯಕ್ವಾಡ್(2-42) ಹಾಗೂ ಹರ್ಮನ್ಪ್ರೀತ್ ಕೌರ್(2-23) ಆಸ್ಟ್ರೇಲಿಯದ ಪ್ರತಿರೋಧವನ್ನು ಹಿಮ್ಮೆಟ್ಟಿಸಿದರು.
ಅಲ್ಪ ಮುನ್ನಡೆ ಪಡೆದ ಆಸ್ಟ್ರೇಲಿಯವು ದಿನದ ಆರಂಭದಲ್ಲಿ ಐದು ವಿಕೆಟ್ಗಳನ್ನು ಕಳೆದುಕೊಂಡು ಕುಸಿತ ಕಂಡಿತು. ಭಾರತದ ಯಶಸ್ಸಿನಲ್ಲಿ ಪೂಜಾ ವಸ್ತ್ರಾಕರ್, ಸ್ನೇಹ್ ರಾಣಾ ಹಾಗೂ ರಾಜೇಶ್ವರಿ ಗಾಯಕ್ವಾಡ್ ಪ್ರಮುಖ ಪಾತ್ರ ವಹಿಸಿದರು.
ಬ್ಯಾಟಿಂಗ್ನಲ್ಲಿ ಭಾರತದ ಪ್ರದರ್ಶನ ಅತ್ಯುತ್ತಮವಾಗಿತ್ತು. ಮೊದಲ ಇನಿಂಗ್ಸ್ನಲ್ಲಿ ಒಟ್ಟು 406 ರನ್ ಗಳಿಸಿದ್ದ ಭಾರತವು ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಗರಿಷ್ಠ ಮೊತ್ತ ದಾಖಲಿಸಿತು.
ಗೆಲ್ಲಲು ಕೇವಲ 75 ರನ್ ಗುರಿ ಪಡೆದ ಭಾರತ ತಂಡಕ್ಕೆ ರಿಚಾ ಘೋಷ್(13 ರನ್) ಹಾಗೂ ಸ್ಮತಿ ಮಂಧಾನ(38 ರನ್) ಆಸರೆಯಾದರು. ಸ್ವದೇಶದಲ್ಲಿ ನಡೆದ ವರ್ಷದ ಕೊನೆಯ ಪಂದ್ಯದಲ್ಲಿ ಸ್ಮರಣೀಯ ಗೆಲುವು ದಾಖಲಿಸಿತು.
ಈ ಗೆಲುವು ಭಾರತೀಯ ಮಹಿಳಾ ಕ್ರಿಕೆಟ್ ನಲ್ಲಿ ಮಹತ್ವದ ಮೈಲಿಗಲ್ಲಾಗಿದ್ದು, ದೇಶದಲ್ಲಿ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ತೆರೆದಿದೆ.
ಅಂಕಿ-ಅಂಶ
ಭಾರತವು ಮಹಿಳೆಯರ ಟೆಸ್ಟ್ನಲ್ಲಿ ಆಸ್ಟ್ರೇಲಿಯ ವಿರುದ್ಧ ಮೊದಲ ಬಾರಿ ಜಯ ದಾಖಲಿಸಿದೆ. ಈ ಹಿಂದೆ 10 ಪಂದ್ಯಗಳ ಪೈಕಿ ನಾಲ್ಕರಲ್ಲಿ ಸೋತಿರುವ ಭಾರತವು ಆರು ಪಂದ್ಯಗಳಲ್ಲಿ ಡ್ರಾ ಸಾಧಿಸಿತ್ತು.
ಭಾರತವು ತವರಿನಲ್ಲಿ ಆಡಿರುವ ಹಿಂದಿನ 3 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಈ ತಿಂಗಳು ಆಸೀಸ್ ಹಾಗೂ ಇಂಗ್ಲೆಂಡ್ ವಿರುದ್ಧ ಆಡುವ ಮೊದಲು 2014ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸ್ವದೇಶಿ ಟೆಸ್ಟ್ ಪಂದ್ಯ ಆಡಿತ್ತು.ಆಗ ಇನಿಂಗ್ಸ್ ಅಂತರದಿಂದ ಜಯ ದಾಖಲಿಸಿತ್ತು. ಭಾರತಕ್ಕಿಂತ ಮೊದಲು 1991 ಹಾಗೂ 1992ರಲ್ಲಿ ಆಸ್ಟ್ರೇಲಿಯವು ಸ್ವದೇಶದಲ್ಲಿ ಸತತ ಮೂರು ಮಹಿಳಾ ಟೆಸ್ಟ್ ಪಂದ್ಯಗಳನ್ನು ಜಯಿಸಿದ ಏಕೈಕ ತಂಡವಾಗಿದೆ.
ಭಾರತವು ವೈಯಕ್ತಿಕ ಶತಕದ ಬೆಂಬಲವಿಲ್ಲದೆ ಮೊದಲ ಇನಿಂಗ್ಸ್ನಲ್ಲಿ 406 ರನ್ ಗಳಿಸಿದ ಮೊದಲ ತಂಡವೆನಿಸಿಕೊಂಡಿದೆ.
ಆಸ್ಟ್ರೇಲಿಯದ ತಾಹ್ಲಿಯಾ ಮೆಕ್ಗ್ರಾತ್ ಟೆಸ್ಟ್ನ ಎರಡೂ ಇನಿಂಗ್ಸ್ಗಳಲ್ಲಿ ಅರ್ಧಶತಕ ಗಳಿಸಿದ ಹೊರತಾಗಿಯೂ ಸೋಲು ಕಂಡಿರುವ ಮೊದಲ ಆಟಗಾರ್ತಿಯಾಗಿದ್ದಾರೆ.
ದೀಪ್ತಿ ಶರ್ಮಾ ಹಾಗೂ ಪೂಜಾ ವಸ್ತ್ರಾಕರ್ ಭಾರತದ ಮೊದಲ ಇನಿಂಗ್ಸ್ನಲ್ಲಿ 8ನೇ ವಿಕೆಟ್ಗೆ 122 ರನ್ ಜೊತೆಯಾಟ ನಡೆಸಿದ್ದರು. ಮಹಿಳೆಯರ ಕ್ರಿಕೆಟ್ನಲ್ಲಿ 8 ಇಲ್ಲವೇ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ದಾಖಲಾದ ಎರಡನೇ ಗರಿಷ್ಠ ಜೊತೆಯಾಟವಾಗಿದೆ.
ದೀಪ್ತಿ ಶರ್ಮಾ ಈ ತನಕ ಆಡಿರುವ ಎಲ್ಲ 4 ಟೆಸ್ಟ್ ಪಂದ್ಯಗಳಲ್ಲಿ ಕನಿಷ್ಠ ಒಂದು ಅರ್ಧಶತಕ ಗಳಿಸಿದ್ದಾರೆ.
ಭಾರತ ಮೊದಲ ಇನಿಂಗ್ಸ್ನಲ್ಲಿ 187 ರನ್ ಮುನ್ನಡೆ ಪಡೆದಿತ್ತು.ಆಸ್ಟ್ರೇಲಿಯ ವಿರುದ್ಧ ಗರಿಷ್ಠ ಮುನ್ನಡೆ ಪಡೆದ ಮೊದಲ ತಂಡ ಎನಿಸಿಕೊಂಡಿತು. 2005ರಲ್ಲಿ ಇಂಗ್ಲೆಂಡ್ 158 ರನ್ ಲೀಡ್ ಪಡೆದಿತ್ತು.
ರಿಚಾ ಘೋಷ್ 2021ರ ನಂತರ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕ ಗಳಿಸಿದ ಭಾರತದ ಆರನೇ ಆಟಗಾರ್ತಿಯಾಗಿದ್ದಾರೆ. ಈ ಅವಧಿಯಲ್ಲಿ 11 ಆಟಗಾರ್ತಿಯರು ಕ್ರಿಕೆಟಿಗೆ ಪಾದಾರ್ಪಣೆಗೈದಿದ್ದಾರೆ. 2021ರಲ್ಲಿ ಶೆಫಾಲಿ, ದೀಪ್ತಿ ಹಾಗೂ ಸ್ನೇಹ್ ರಾಣಾ ತಮ್ಮ ಮೊದಲ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದರು. ಸತೀಶ್ ಶುಭಾ ಹಾಗೂ ಜೆಮಿಮಾ ರೊಡ್ರಿಗಸ್ ಇಂಗ್ಲೆಂಡ್ ವಿರುದ್ಧದ ಹಿಂದಿನ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದ್ದಾರೆ.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯ ಮೊದಲ ಇನಿಂಗ್ಸ್: 219 ರನ್
ಭಾರತ ಮೊದಲ ಇನಿಂಗ್ಸ್: 406 ರನ್
ಆಸ್ಟ್ರೇಲಿಯ ದ್ವಿತೀಯ ಇನಿಂಗ್ಸ್: 261 ರನ್
(ತಾಹ್ಲಿಯಾ ಮೆಕ್ಗ್ರಾತ್ 73, ಎಲ್ಲಿಸ್ ಪೆರ್ರಿ 45, ಬೆತ್ ಮೂನಿ 33, ಅಲಿಸಾ ಹೀಲಿ 32, ಅನಬೆಲ್ ಸದರ್ಲ್ಯಾಂಡ್ 27, ಸ್ನೇಹ್ ರಾಣಾ 4-63, ಹರ್ಮನ್ಪ್ರೀತ್ ಕೌರ್ 2-23, ರಾಜೇಶ್ವರಿ ಗಾಯಕ್ವಾಡ್ 2-42)
ಭಾರತ ದ್ವಿತೀಯ ಇನಿಂಗ್ಸ್: 18.4 ಓವರ್ಗಳಲ್ಲಿ 75/2
(ಸ್ಮತಿ ಮಂಧಾನ 38, ರಿಚಾ ಘೋಷ್ 13, ಜೆಮಿಮಾ ರೊಡ್ರಿಗಸ್ ಔಟಾಗದೆ 12, ಗಾರ್ಡನರ್ 1-18, ಕಿಮ್ ಗಾರ್ತ್ 1-19)
ಪಂದ್ಯಶ್ರೇಷ್ಠ: ಸ್ನೇಹ್ ರಾಣಾ.