ಚೊಚ್ಚಲ ಪಂದ್ಯವನ್ನಾಡಿದ ಸರ್ಫರಾಝ್, ಧ್ರುವ್ ಜುರೆಲ್
Photo : PTI
ರಾಜ್ಕೋಟ್: ಇಂಗ್ಲೆಂಡ್ ವಿರುದ್ಧ 3ನೇ ಟೆಸ್ಟ್ ಪಂದ್ಯಕ್ಕಿಂತ ಮೊದಲು ದೇಶೀಯ ಕ್ರಿಕೆಟ್ ಪ್ರತಿಭೆಗಳಾದ ಸರ್ಫರಾಝ್ ಖಾನ್ ಹಾಗೂ ಧ್ರುವ್ ಜುರೆಲ್ ಗೆ ಟೆಸ್ಟ್ ಕ್ಯಾಪ್ಗಳನ್ನು ಹಸ್ತಾಂತರಿಸಿದಾಗ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಸ್ಟೇಡಿಯಮ್ ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು.
ಮುಂಬೈನ ದೇಶೀಯ ಕ್ರಿಕೆಟ್ ವಲಯದಲ್ಲಿ ಸ್ಥಿರ ಪ್ರದರ್ಶನದ ಮೂಲಕ ಖ್ಯಾತಿ ಪಡೆದಿದ್ದ ಸರ್ಫರಾಝ್ ದೀರ್ಘ ಸಮಯದಿಂದ ರಾಷ್ಟ್ರೀಯ ತಂಡದ ಪರ ಆಡುವುದನ್ನು ನಿರೀಕ್ಷಿಸುತ್ತಿದ್ದರು. ಪ್ರಸಕ್ತ ಸರಣಿಯಲ್ಲಿ ಕೊನೆಗೂ ಟೀಮ್ ಇಂಡಿಯಾವನ್ನು ಪ್ರವೇಶಿಸಿದ್ದ 26ರ ಹರೆಯದ ಸರ್ಫರಾಝ್ ಪ್ರಮುಖ ಆಟಗಾರರಾದ ಕೆ.ಎಲ್.ರಾಹುಲ್ ಹಾಗೂ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತೀಯ ಟೆಸ್ಟ್ ಕ್ಯಾಪ್ ಧರಿಸುವ ಕನಸನ್ನು ಈಡೇರಿಸಿಕೊಂಡರು.
ಭಾರತದ ಮಾಜಿ ನಾಯಕ ಹಾಗೂ ಲೆಜೆಂಡರಿ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ಸರ್ಫರಾಝ್ ಗೆ ಟೆಸ್ಟ್ ಕ್ಯಾಪ್ ಹಸ್ತಾಂತರಿಸಿದರು.
47ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಉತ್ತರಪ್ರದೇಶದ ಧ್ರುವ್ ಜುರೆಲ್ ಚೊಚ್ಚಲ ಪಂದ್ಯ ಆಡುವ ಅವಕಾಶ ಪಡೆದರು.
ಸರ್ಫರಾಝ್ ಟೆಸ್ಟ್ ಕ್ಯಾಪ್ ಸ್ವೀಕರಿಸಿದ ನಂತರ ತನ್ನ ತಂದೆ ಹಾಗೂ ಕೋಚ್ ನೌಶಾದ್ ಖಾನ್ ಬಳಿ ಸಂತೋಷವನ್ನು ಹಂಚಿಕೊಂಡು ಆನಂದ ಭಾಷ್ಪ ಸುರಿಸಿದರು.