7ನೇ ಬಾರಿ ಐಸಿಸಿ ಪ್ರಶಸ್ತಿ ಗೆದ್ದ ಟೀಮ್ ಇಂಡಿಯಾ

ಹೊಸದಿಲ್ಲಿ: ದುಬೈನಲ್ಲಿ ರವಿವಾರ ನಡೆದ 2025ರ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ನಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು ಸದೆಬಡಿದ ನಂತರ ಟೀಮ್ ಇಂಡಿಯಾವು ತನ್ನ 7ನೇ ಐಸಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಭಾರತ ಕ್ರಿಕೆಟ್ ತಂಡವು ಮೂರನೇ ಬಾರಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಜಯಿಸಿ ಆಸ್ಟ್ರೇಲಿಯ ತಂಡದ(2)ದಾಖಲೆಯನ್ನು ಹಿಂದಿಕ್ಕಿದೆ. ಕಳೆದ ವರ್ಷ ಜೂನ್ನಲ್ಲಿ ಟಿ-20 ವಿಶ್ವಕಪ್ ಕಿರೀಟ ಧರಿಸಿದ್ದ ಭಾರತ ತಂಡವು ಸತತ ಎರಡನೇ ಬಾರಿ ಐಸಿಸಿ ಪ್ರಶಸ್ತಿಯನ್ನು ಬಾಚಿಕೊಂಡಿದೆ.
ಭಾರತ ತಂಡವು ಇದೀಗ 2 ಏಕದಿನ ವಿಶ್ವಕಪ್, 2 ಟಿ20 ವಿಶ್ವಕಪ್ ಹಾಗೂ 3 ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಗಳನ್ನು ಗೆದ್ದಿದೆ.
ರೋಹಿತ್ ಶರ್ಮಾ ಪ್ರಸಕ್ತ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ತನ್ನ ಮೊದಲ ಅರ್ಧಶತಕವನ್ನು ಗಳಿಸಿದ್ದಲ್ಲದೆ,ಏಕದಿನ ಟೂರ್ನಿಯ ಫೈನಲ್ನಲ್ಲಿ ಮೊದಲ ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.
ಭಾರತೀಯ ಸ್ಪಿನ್ನರ್ಗಳು 5 ಪಂದ್ಯಗಳಲ್ಲಿ 28.3ರ ಸರಾಸರಿಯಲ್ಲಿ ಒಟ್ಟು 26 ವಿಕೆಟ್ಗಳನ್ನು ಪಡೆದಿದ್ದಾರೆ. 2013ರ ಆವೃತ್ತಿಯಲ್ಲಿ 20 ವಿಕೆಟ್ಗಳನ್ನು ಪಡೆದಿದ್ದರು.
ಭಾರತ ತಂಡ 2023ರ ಏಕದಿನ ವಿಶ್ವಕಪ್, 2024ರ ಟಿ-20 ವಿಶ್ವಕಪ್ ಹಾಗೂ 2025ರ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಗಳಲ್ಲಿ ಆಡಿರುವ 23 ಪಂದ್ಯಗಳ ಪೈಕಿ 22ರಲ್ಲಿ ಜಯ ಸಾಧಿಸಿದೆ.
ಪಂದ್ಯಾವಳಿ | ವರ್ಷ | ಫಲಿತಾಂಶ |
ಏಕದಿನ ವಿಶ್ವಕಪ್ | 1983 | ವಿನ್ನರ್ |
ಐಸಿಸಿ ಚಾಂಪಿಯನ್ಸ್ ಟ್ರೋಫಿ ವಿನ್ನರ್ | 2002 | (ಶ್ರೀಲಂಕಾ ಜೊತೆಗೆ ಟ್ರೋಫಿ ಹಂಚಿಕೆ) |
ಐಸಿಸಿ ಟಿ-20 ವಿಶ್ವಕಪ್ | 2007 | ವಿನ್ನರ್ |
ಏಕದಿನ ವಿಶ್ವಕಪ್ | 2011 | ವಿನ್ನರ್ |
ಐಸಿಸಿ ಚಾಂಪಿಯನ್ಸ್ ಟ್ರೋಫಿ | 2013 | ವಿನ್ನರ್ |
ಐಸಿಸಿ ಟಿ-20 ವಿಶ್ವಕಪ್ | 2024 | ವಿನ್ನರ್ |
ಐಸಿಸಿ ಚಾಂಪಿಯನ್ಸ್ ಟ್ರೋಫಿ | 2025 | ವಿನ್ನರ್ |