ನಾಲ್ಕನೆ ಟೆಸ್ಟ್: ಇಂಗ್ಲೆಂಡ್ 353 ರನ್ ಗೆ ಆಲೌಟ್; ಬ್ಯಾಟಿಂಗ್ಗೆ ಇಳಿದ ಭಾರತಕ್ಕೆ ಆರಂಭಿಕ ಆಘಾತ
Photo:X/BCCI
ರಾಂಚಿ: ಇಂಗ್ಲೆಂಡ್ ತಂಡವನ್ನು 353 ರನ್ಗೆ ಕಟ್ಟಿ ಹಾಕಿ ಬ್ಯಾಟಿಂಗ್ಗೆ ಇಳಿದ ಭಾರತ ತಂಡವು, ತಂಡದ ಮೊತ್ತ ಕೇವಲ ನಾಲ್ಕು ರನ್ಗಳಾಗಿದ್ದಾಗ ನಾಯಕ ರೋಹಿತ್ ಶರ್ಮ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದೆ. ರೋಹಿತ್ ಶರ್ಮ ಕೇವಲ ಎರಡು ರನ್ ಗಳಿಸಿದ್ದಾಗ ಜೇಮ್ಸ್ ಆ್ಯಂಡರ್ಸನ್ ಬೌಲಿಂಗ್ನಲ್ಲಿ ಬೆನ್ ಫೋಕ್ಸ್ಗೆ ಕ್ಯಾಚಿತ್ತು ನಿರ್ಗಮಿಸಿದರು.
ಇತ್ತೀಚಿನ ವರದಿಗಳ ಪ್ರಕಾರ ಭಾರತ ತಂಡವು ಒಂದು ವಿಕೆಟ್ ನಷ್ಟಕ್ಕೆ 34 ರನ್ ಗಳಿಸಿ ಆಟವಾಡುತ್ತಿದೆ. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅಜೇಯ 27 ರನ್ ಹಾಗೂ ಶುಭಮನ್ ಗಿಲ್ ಅಜೇಯ 4 ರನ್ ಗಳಿಸಿ ಆಡುತ್ತಿದ್ದಾರೆ.
ಇದಕ್ಕೂ ಮುನ್ನ, ಜೋ ರೂಟ್ ಹಾಗೂ ರಾಬಿನ್ಸನ್ ನಡುವಿನ ಉತ್ತಮ ಜೊತೆಯಾಟದಿಂದ ಇಂಗ್ಲೆಂಡ್ ತಂಡವು ಸವಾಲಿನ 353 ರನ್ ಪೇರಿಸಿದೆ. ಇಂದು ಆಟ ಮುಂದುವರಿಸಿದ ರಾಬಿನ್ಸನ್, ಆಕ್ರಮಣಕಾರಿ ಆಟ ಆಡುವ ಮೂಲಕ ಅರ್ಧ ಶತಕ (58) ಗಳಿಸಿದರು. ಅವರು ರವೀಂದ್ರ ಜಡೇಜಾ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ಧ್ರುವ್ ಜುರೇಲ್ ಹಿಡಿದ ಕ್ಯಾಚಿಗೆ ಔಟಾಗಿ ಪೆವಿಲಿಯನ್ಗೆ ಮರಳಿದರು. ಅವರ ನಿರ್ಗಮನದ ಬಳಿಕ ಹೆಚ್ಚು ಪ್ರತಿರೋಧ ಒಡ್ಡದ ಇಂಗ್ಲೆಂಡ್ ಆಟಗಾರರು ತಂಡದ ಮೊತ್ತ 353 ರನ್ ಆಗಿದ್ದಾಗ ಆಲೌಟ್ ಆದರು.