ದ್ವಿತೀಯ ಟೆಸ್ಟ್| ಭಾರತದ ಸ್ಪಿನ್ನರ್ ಗಳ ಮೇಲುಗೈ: ನ್ಯೂಝಿಲೆಂಡ್ 255ಕ್ಕೆ ಆಲೌಟ್
Photo: PTI
ಪುಣೆ: ಇಲ್ಲಿ ನಡೆಯುತ್ತಿರುವ ಭಾರತ-ನ್ಯೂಝಿಲೆಂಡ್ ನಡುವಿನ ದ್ವಿತೀಯ ಟೆಸ್ಟ್ ನ ಎರಡನೆ ಇನಿಂಗ್ಸ್ ನಲ್ಲಿ ಮತ್ತೆ ತಮ್ಮ ಕೈಚಳಕ ತೋರಿದ ವಾಷಿಂಗ್ಟನ್ ಸುಂದರ್, ನ್ಯೂಝಿಲೆಂಡ್ ತಂಡದ ಮೊತ್ತ 255ಕ್ಕೆ ಸೀಮಿತವಾಗುವಂತೆ ನೋಡಿಕೊಂಡರು. ಮೊದಲನೆ ಇನಿಂಗ್ಸ್ ನಲ್ಲಿ 7 ವಿಕೆಟ್ ಕಿತ್ತಿದ್ದ ವಾಷಿಂಗ್ಟನ್ ಸುಂದರ್, ಎರಡನೆ ಇನಿಂಗ್ಸ್ ನಲ್ಲೂ ಪರಿಣಾಮಕಾರಿ ಬೌಲಿಂಗ್ ಪ್ರದರ್ಶಿಸಿ, 4 ವಿಕೆಟ್ ಕಬಳಿಸಿದರು. ಆ ಮೂಲಕ ಪಂದ್ಯವೊಂದರಲ್ಲಿ 10ಕ್ಕೂ ಹೆಚ್ಚು ವಿಕೆಟ್ ಗಳಿಸಿದ ಸಾಧನೆ ಮಾಡಿದರು.
ನಿನ್ನೆ ದಿನದಾಂತ್ಯಕ್ಕೆ 5 ವಿಕೆಟ್ ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿದ್ದ ನ್ಯೂಝಿಲೆಂಡ್, ಇಂದು ಆಟ ಮುಂದುವರಿಸಿ ಕೇವಲ 57 ರನ್ ಪೇರಿಸುವುದರೊಳಗೆ ಆಲೌಟ್ ಆಯಿತು.
ಸ್ಪಿನ್ನರ್ ಗಳಿಗೆ ಅನುಕೂಲಕರವಾಗಿದ್ದ ಪಿಚ್ ನಲ್ಲಿ ವಾಷಿಂಗ್ಟನ್ ಸುಂದರ್ ಮತ್ತೆ 4 ವಿಕೆಟ್ ಕಿತ್ತರೆ, ರವಿಚಂದ್ರನ್ ಅಶ್ವಿನ್ 2 ವಿಕೆಟ್ ಹಾಗೂ ರವೀಂದ್ರ ಜಡೇಜಾ 3 ವಿಕೆಟ್ ಕಬಳಿಸಿದರು.
359 ರನ್ ಗಳ ಬೃಹತ್ ಗುರಿಯನ್ನು ಬೆನ್ನಟ್ಟಿರುವ ಭಾರತ ತಂಡ, ಇತ್ತೀಚಿನ ವರದಿಗಳ ಪ್ರಕಾರ, ಎರಡನೆ ಇನಿಂಗ್ಸ್ ನಲ್ಲಿ ವಿಕೆಟ್ ನಷ್ಟವಿಲ್ಲದೆ 30 ರನ್ ಗಳಿಸಿದೆ.