ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಭಾರತ
Photo: twitter.com/JayShah
ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಎರಡನೇ ಪಂದ್ಯದಲ್ಲಿ ಏಳು ವಿಕೆಟ್ಗಳ ಭರ್ಜರಿ ಜಯ ಗಳಿಸುವ ಮೂಲಕ ಸರಣಿಯಲ್ಲಿ 1-1 ಸಮಬಲ ಸಾಧಿಸಿರುವ ಭಾರತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಈ ಪಂದ್ಯದಲ್ಲಿ ಮೊಹ್ಮದ್ ಸಿರಾಜ್ ಹಾಗೂ ಜಸ್ಪ್ರೀತ್ ಬೂಮ್ರಾ 15 ವಿಕೆಟ್ ಹಂಚಿಕೊಂಡಿದ್ದರು. ಮೊದಲ ಇನಿಂಗ್ಸ್ ನಲ್ಲಿ ಸಿರಾಜ್ 15 ರನ್ ಗಳಿಗೆ ಆರು ವಿಕೆಟ್ ಕಬಳಿಸಿದರೆ, ಬೂಮ್ರಾ 2 ವಿಕೆಟ್ ಪಡೆದಿದ್ದರು. ಎರಡನೇ ಇನಿಂಗ್ಸ್ ನಲ್ಲಿ ಬೂಮ್ರಾ 61 ರನ್ ಗೆ6 ವಿಕೆಟ್ ಪಡೆದರೆ, ಸಿರಾಜ್ ಒಂದು ವಿಕೆಟ್ ಗಳಿಸಿದರು.
2023-25ರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ ಭಾರತ 54.16 ಶೇಕಡಾವಾರು ಅಂಕದೊಂದಿಗೆ ಅಗ್ರಸ್ಥಾನ ಸಂಪಾದಿಸಿದ್ದರೆ, ದಕ್ಷಿಣ ಆಫ್ರಿಕಾ 50 ಶೇಕಡಾವಾರು ಅಂಕದೊಂದಿಗೆ ಎರಡನೇ ಸ್ಥಾನದಲ್ಲಿದೆ. ಪಾಕಿಸ್ತಾನ ಐದನೇ ಸ್ಥಾನದಿಂದ ಮತ್ತೆ ಜಾರಿದ್ದು, 45.83 ಅಂಕದೊಂದಿಗೆ ಆರನೇ ಸ್ಥಾನದಲ್ಲಿದೆ.
ಭಾರತ 26 ಅಂಕಗಳನ್ನು ತನ್ನ ಖಾತೆಯಲ್ಲಿ ಹೊಂದಿದ್ದು, ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ತಲಾ 12 ಅಂಕಗಳನ್ನು ಹೊಂದಿವೆ. ಆಸ್ಟ್ರೇಲಿಯಾ 42 ಹಾಗೂ ಬಾಂಗ್ಲಾದೇಶ 12 ಅಂಕ ಪಡೆದಿದ್ದು, ಎಲ್ಲ ತಂಡಗಳ ಯಶಸ್ಸಿನ ದರ ಶೇಕಡ 50ರಷ್ಟಿದೆ. ಪಾಕಿಸ್ತಾನ 22 ಅಂಕ ಹೊಂದಿದ್ದರೂ, ಶೇಕಡಾವಾರು ಯಶಸ್ಸಿನ ದರದಲ್ಲಿ ಆರನೇ ಸ್ಥಾನದಲ್ಲಿದೆ. ವೆಸ್ಟ್ಇಂಡೀಸ್ (16.67), ಇಂಗ್ಲೆಂಡ್ (15.0) ಮತ್ತು ಶ್ರೀಲಂಕಾ (0.00) ನಂತರದ ಸ್ಥಾನಗಳಲ್ಲಿವೆ.
ಕೇವಲ ಐದು ಸೆಷನ್ ನಲ್ಲಿ ಅಂದರೆ 107 ಓವರ್ ಗಳನ್ನೇ ಅಂತ್ಯಗೊಂಡ ಪಂದ್ಯದಲ್ಲಿ ಭಾರತ ತಂಡ, ದಕ್ಷಿಣ ಆಫ್ರಿಕಾವನ್ನು ಏಳು ವಿಕೆಟ್ ಅಂತರದಿಂದ ಸೋಲಿಸಿತ್ತು. ಮೊದಲ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 32 ರನ್ ಗಳ ಹೀನಾಯ ಸೋಲು ಅನುಭವಿಸಿದ್ದ ಭಾರತ ಎರಡನೇ ಪಂದ್ಯ ಗೆಲ್ಲುವ ಮೂಲಕ ಸರಣಿ ಸಮಬಲ ಸಾಧಿಸಿತ್ತು.