ಅತಿ ಹೆಚ್ಚು ಟಿ20 ಪಂದ್ಯಗಳನ್ನು ಗೆದ್ದು ಇತಿಹಾಸ ಸೃಷ್ಟಿಸಿದ ಭಾರತ
Photo: @BCCI \ X
ಹೊಸದಿಲ್ಲಿ: ಅಂತರ್ರಾಷ್ಟ್ರೀಯ ಟ್ವೆಂಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚಿನ ಪಂದ್ಯಗಳನ್ನು ಗೆದ್ದ ತಂಡವಾಗಿ ಭಾರತ ಶುಕ್ರವಾರ ಹೊಸ ಇತಿಹಾಸವನ್ನು ಸೃಷ್ಟಿಸಿದೆ.
ರಾಯ್ಪುರದಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧದ ಟ್ವೆಂಟಿ20 ಸರಣಿಯ ನಾಲ್ಕನೇ ಪಂದ್ಯವನ್ನು ಗೆಲ್ಲುವುದರೊಂದಿಗೆ ಭಾರತ ಚುಟುಕು ಕ್ರಿಕೆಟ್ನ ಇತಿಹಾಸದಲ್ಲಿ ಮೈಲಿಗಲ್ಲೊಂದನ್ನು ಸ್ಥಾಪಿಸಿದೆ. ಈ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯವನ್ನು 20 ರನ್ಗಳಿಂದ ಸೋಲಿಸಿತು. ಅಷ್ಟೇ ಅಲ್ಲ, ಸರಣಿಯನ್ನೂ 3-1ರಿಂದ ತನ್ನದಾಗಿಸಿಕೊಂಡಿತು.
ಇದರೊಂದಿಗೆ, ಭಾರತವು ಅಂತರ್ರಾಷ್ಟ್ರೀಯ ಟ್ವೆಂಟಿ20 ಪಂದ್ಯಗಳಲ್ಲಿ 136ನೇ ಜಯವನ್ನು ಸಂಪಾದಿಸಿದೆ.
2006ರಲ್ಲಿ ಭಾರತ ತನ್ನ ಚೊಚ್ಚಲ ಅಂತರ್ರಾಷ್ಟ್ರೀಯ ಟ್ವೆಂಟಿ20 ಪಂದ್ಯವನ್ನು ಆಡಿದ ಬಳಿಕ ಈವರೆಗೆ 213 ಪಂದ್ಯಗಳಲ್ಲಿ ಆಡಿದೆ. ಈ ಪೈಕಿ 136 ಪಂದ್ಯಗಳಲ್ಲಿ ಅದು ಜಯ ಗಳಿಸಿದರೆ, 67 ಪಂದ್ಯಗಳಲ್ಲಿ ಸೋಲನುಭವಿಸಿದೆ. ಒಂದು ಪಂದ್ಯ ಟೈ ಆಗಿದೆ ಮತ್ತು ಮೂರು ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿದೆ.
ಅಂತರ್ರಾಷ್ಟ್ರೀಯ ಟ್ವೆಂಟಿ20 ಪಂದ್ಯಗಳಲ್ಲಿ ಭಾರತದ ಗೆಲುವಿನ ಶೇಕಡಾವಾರು 63.84 ಆಗಿದೆ.
ಈ ಮೂಲಕ ಭಾರತವು ತನ್ನ ಪ್ರಾದೇಶಿಕ ಎದುರಾಳಿ ಪಾಕಿಸ್ತಾನವನ್ನು ಹಿಂದಿಕ್ಕಿದೆ. ಪಾಕಿಸ್ತಾನವು 226 ಅಂತರ್ರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿ 135ರಲ್ಲಿ ಜಯ ಗಳಿಸಿದೆ.
ಮೂರನೇ ಸ್ಥಾನದಲ್ಲಿ ನ್ಯೂಝಿಲ್ಯಾಂಡ್ ಇದೆ. ಅದು 200 ಪಂದ್ಯಗಳನ್ನು ಆಡಿ 102ರಲ್ಲಿ ಗೆದ್ದಿದೆ. ನಾಲ್ಕನೇ ಸ್ಥಾನದಲ್ಲಿ ಬರುವ ಆಸ್ಟ್ರೇಲಿಯ 181 ಪಂದ್ಯಗಳನ್ನು ಆಡಿ 95ರಲ್ಲಿ ವಿಜಯಿಯಾಗಿ ಹೊರಹೊಮ್ಮಿದೆ. ದಕ್ಷಿಣ ಆಫ್ರಿಕವು 171 ಅಂತರ್ರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿ 95ರಲ್ಲಿ ಗೆಲುವು ಸಾಧಿಸಿದೆ.