ಅಶ್ವಿನ್ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ: ಮೊದಲ ಟೆಸ್ಟ್ ನಲ್ಲಿ ಭಾರತಕ್ಕೆ ಭರ್ಜರಿ ಜಯ
Photo:X/BCCI
ಚೆನ್ನೈ: ತವರು ಮೈದಾನದಲ್ಲಿ ಶತಕ ಹಾಗೂ ಆರು ವಿಕೆಟ್ ಗೊಂಚಲು ಮೂಲಕ ಆಲ್ರೌಂಡ್ ಪ್ರದರ್ಶನ ನೀಡಿದ ಆರ್.ಅಶ್ವಿನ್ ಭಾರತ ಕ್ರಿಕೆಟ್ ತಂಡವು ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು 280 ರನ್ ಅಂತರದಿಂದ ಜಯ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಗೆಲುವಿನ ಮೂಲಕ ರೋಹಿತ್ ಬಳಗವು 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಸತತ ಮೂರನೇ ದಿನವೂ ಬೆಳಗ್ಗೆ ಮೋಡಕವಿದ ವಾತಾವರಣ ಇತ್ತು. ಮೊದಲ ಇನಿಂಗ್ಸ್ನಲ್ಲಿ ಶತಕ ಸಿಡಿಸಿ ಮಿಂಚಿದ್ದ ಅಶ್ವಿನ್ 37ನೇ ಬಾರಿ ಐದು ವಿಕೆಟ್ ಗೊಂಚಲು ಪಡೆದು ಬಾಂಗ್ಲಾದೇಶದ ಬ್ಯಾಟಿಂಗ್ ಸರದಿಗೆ ಮರ್ಮಾಘಾತ ನೀಡಿದರು. ಅಶ್ವಿನ್ ಭಾರತಕ್ಕೆ 4ನೇ ದಿನವಾದ ರವಿವಾರ ಭೋಜನ ವಿರಾಮಕ್ಕೆ ಮೊದಲೇ ಭರ್ಜರಿ ಗೆಲುವು ತಂದುಕೊಟ್ಟರು.
ಮೂರನೇ ದಿನವಾದ ಶನಿವಾರ ಗೆಲ್ಲಲು 515 ರನ್ ಗುರಿ ಪಡೆದಿದ್ದ ಬಾಂಗ್ಲಾದೇಶ ತಂಡವು 4 ವಿಕೆಟ್ಗಳ ನಷ್ಟಕ್ಕೆ 158 ರನ್ನಿಂದ ತನ್ನ ಎರಡನೇ ಇನಿಂಗ್ಸ್ ಮುಂದುವರಿಸಿತು. ಶನಿವಾರ ಮೂರು ವಿಕೆಟ್ಗಳನ್ನು ಉರುಳಿಸಿದ್ದ ಅಶ್ವಿನ್ ಇಂದು ಪಂದ್ಯ ಆರಂಭವಾಗಿ ಒಂದು ಗಂಟೆಯ ನಂತರ ಬೌಲಿಂಗ್ ಆರಂಭಿಸಿದರು. ಬೌಲಿಂಗ್ ಆರಂಭಿಸಿದ ತಕ್ಷಣವೇ ಶಾಕಿಬ್ ಅಲ್ ಹಸನ್(25 ರನ್) ವಿಕೆಟನ್ನು ಉರುಳಿಸಿ ಭಾರತಕ್ಕೆ ಮೇಲುಗೈ ಒದಗಿಸಿದರು.
ಭಾರೀ ಸೋಲಿನ ಸುಳಿವರಿತ ಮೆಹದಿ ಹಸನ್ ದೊಡ್ಡ ಹೊಡೆತಕ್ಕೆ ಕೈಹಾಕಿದರು. ಆದರೆ 8 ರನ್ ಗಳಿಸಿ ಅಶ್ವಿನ್ ಎಸೆತದಲ್ಲಿ ಜಡೇಜಗೆ ಕ್ಯಾಚ್ ನೀಡಿದರು. ಹಸನ್ ವಿಕೆಟ್ ಪಡೆಯುವ ಮೂಲಕ ಅಶ್ವಿನ್ ಐದು ವಿಕೆಟ್ ಗೊಂಚಲು ಪೂರೈಸಿದರು. ನಾಲ್ಕು ಬಾರಿ ಇನಿಂಗ್ಸ್ವೊಂದರಲ್ಲಿ ಶತಕ ಹಾಗೂ ಐದು ವಿಕೆಟ್ ಪಡೆದ ಸಾಧನೆ ಮಾಡಿದರು.
ತಸ್ಕಿನ್ ಅಹ್ಮದ್(5ರನ್)ರನ್ನು ಪೆವಿಲಿಯನ್ಗೆ ಕಳುಹಿಸಿದ ಅಶ್ವಿನ್ ಆರನೇ ವಿಕೆಟ್ ಪಡೆದರು. ನಾಯಕ ನಜ್ಮುಲ್ ಹುಸೈನ್ ಶಾಂಟೊ(82 ರನ್, 127 ಎಸೆತ)ಸ್ವೀಪ್ ಹಾಗೂ ರಿವರ್ಸ್ ಸ್ವೀಪ್ ಮೂಲಕ ಬಾಂಗ್ಲಾದೇಶ ಪರ ಏಕಾಂಗಿ ಹೋರಾಟ ನೀಡಿದರು. ಶತಕ ಗಳಿಸುವ ವಿಶ್ವಾಸ ಮೂಡಿಸಿದ್ದ ನಜ್ಮುಲ್ ಹುಸೈನ್ ಸ್ಪಿನ್ನರ್ ಜಡೇಜ ಬೌಲಿಂಗ್ನಲ್ಲಿ ಬುಮ್ರಾಗೆ ಕ್ಯಾಚ್ ನೀಡಿದರು. ನಜ್ಮುಲ್ ಔಟಾಗುವುದರೊಂದಿಗೆ ಬಾಂಗ್ಲಾದ ಹೋರಾಟವೂ ಅಂತ್ಯವಾಯಿತು.
ಮೊದಲ ದಿನದಾಟದಲ್ಲಿ ಭಾರತದ ಅಗ್ರ ಸರದಿಯ ಆಟಗಾರರಿಗೆ ಸಿಂಹಸ್ವಪ್ನರಾಗಿದ್ದ ವೇಗದ ಬೌಲರ್ ಹಸನ್ ಮಹ್ಮೂದ್(7ರನ್)ವಿಕೆಟ್ ಪಡೆದ ರವೀಂದ್ರ ಜಡೇಜ ಬಾಂಗ್ಲಾದೇಶದ ಇನಿಂಗ್ಸ್ಗೆ ತೆರೆ ಎಳೆದರು.
ಸ್ಪಿನ್ನರ್ಗಳಾದ ಅಶ್ವಿನ್ ಹಾಗೂ ರವೀಂದ್ರ ಜಡೇಜ 9 ವಿಕೆಟ್ಗಳನ್ನು ಹಂಚಿಕೊಂಡರು. ಜಸ್ಪ್ರಿತ್ ಬುಮ್ರಾ(1-24) ಏಕೈಕ ವಿಕೆಟ್ ಪಡೆದರು.
ಮೊದಲ ಇನಿಂಗ್ಸ್ನಲ್ಲಿ 113 ರನ್ ಹಾಗೂ 2ನೇ ಇನಿಂಗ್ಸ್ನಲ್ಲಿ ಐದು ವಿಕೆಟ್ ಗೊಂಚಲು(6-88) ಪಡೆದಿರುವ ಲೋಕಲ್ ಹೀರೋ ಆರ್.ಅಶ್ವಿನ್ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದರು.
ರಿಷಭ್ ಪಂತ್(109 ರನ್)ಹಾಗೂ ಶುಭಮನ್ ಗಿಲ್(119 ರನ್)ಅವಳಿ ಶತಕದ ನೆರವಿನಿಂದ 2ನೇ ಇನಿಂಗ್ಸ್ನಲ್ಲಿ 4 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿದ್ದ ಭಾರತವು ಒಟ್ಟು 514 ರನ್ ಮುನ್ನಡೆ ಪಡೆದಿತ್ತು.
ಶನಿವಾರ ಮಂದಬೆಳಕಿನಿಂದಾಗಿ ಮೂರನೇ ದಿನದಾಟ ಬೇಗನೆ ಕೊನೆಗೊಂಡಾಗ ಬಾಂಗ್ಲಾದೇಶ 4 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತ್ತು.
ಅಂಕಿ-ಅಂಶ
37: ಆರ್.ಅಶ್ವಿನ್ ಟೆಸ್ಟ್ ಕ್ರಿಕೆಟ್ನಲ್ಲಿ 37ನೇ ಬಾರಿ ಐದು ವಿಕೆಟ್ ಗೊಂಚಲು ಕಬಳಿಸಿದರು. ಟೆಸ್ಟ್ ಮಾದರಿಯ ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ 2ನೇ ಬೌಲರ್ ಎನಿಸಿಕೊಂಡರು. ಇದೀಗ ಶೇನ್ ವಾರ್ನ್ ಜೊತೆಗೆ 2ನೇ ಸ್ಥಾನ ಹಂಚಿಕೊಂಡಿದ್ದಾರೆ. ಮುತ್ತಯ್ಯ ಮುರಳೀಧರನ್(67) ಮೊದಲ ಸ್ಥಾನದಲ್ಲಿದ್ದಾರೆ.
6: ಟೆಸ್ಟ್ ಕ್ರಿಕೆಟ್ನಲ್ಲಿ ರಿಷಭ್ ಪಂತ್ ಆರನೇ ಶತಕ ಸಿಡಿಸಿದರು. ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ಶತಕ ಗಳಿಸಿದ ವಿಕೆಟ್ಕೀಪರ್ ಎಂ.ಎಸ್ ಧೋನಿ ಅವರೊಂದಿಗೆ ದಾಖಲೆ ಹಂಚಿಕೊಂಡರು.
38: ಅಶ್ವಿನ್ ಚೆನ್ನೈ ಟೆಸ್ಟ್ ಪಂದ್ಯವನ್ನಾಡಲು ಕಣಕ್ಕಿಳಿದಾಗ 38 ವರ್ಷವಾಗಿತ್ತು. ಇದೀಗ ಟೆಸ್ಟ್ನಲ್ಲಿ ಭಾರತದ ಪರ ಐದು ವಿಕೆಟ್ ಗೊಂಚಲು ಪಡೆದ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಈ ಹಿಂದೆ 1955ರಲ್ಲಿ ವಿನೂ ಮಂಕಡ್ 37 ವರ್ಷ, 306ನೇ ದಿನದಲ್ಲಿ ಪೇಶಾವರ ಟೆಸ್ಟ್ನಲ್ಲಿ ಪಾಕಿಸ್ತಾನದ ವಿರುದ್ಧ್ದ ಐದು ವಿಕೆಟ್ ಪಡೆದಿದ್ದರು.
01: ಒಂದೇ ಕ್ರೀಡಾಂಗಣದಲ್ಲಿ ಎರಡು ಬಾರಿ ಶತಕ ಹಾಗೂ ಐದು ವಿಕೆಟ್ ಗೊಂಚಲು ಪಡೆದ ಮೊದಲ ಆಟಗಾರ ಆರ್.ಅಶ್ವಿನ್. ಬಾಂಗ್ಲಾದೇಶ ವಿರುದ್ಧ ಪಂದ್ಯಕ್ಕಿಂತ ಮೊದಲು ಅಶ್ವಿನ್ 2021ರಲ್ಲಿ ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ ಈ ಸಾಧನೆ ಮಾಡಿದ್ದರು.
01: ಅಶ್ವಿನ್ ಪುರುಷರ ಟೆಸ್ಟ್ ಕ್ರಿಕೆಟ್ನಲ್ಲಿ ಶತಕ ಹಾಗೂ ಐದು ವಿಕೆಟ್ ಕಬಳಿಸಿ ಡಬಲ್ ಸಾಧನೆ ಮಾಡಿದ ಮೊದಲ ಹಿರಿಯ ವಯಸ್ಸಿನ ಆಟಗಾರನಾಗಿದ್ದಾರೆ. ಪಾಲಿ ಉಮ್ರಿಗರ್ 1962ರಲ್ಲಿ ಪೋರ್ಟ್ ಆಫ್ ಸ್ಪೇನ್ನಲ್ಲಿ ವೆಸ್ಟ್ಇಂಡೀಸ್ ವಿರುದ್ಧ ತನ್ನ 36ನೇ ವಯಸ್ಸಿನಲ್ಲಿ ಔಟಾಗದೆ 172 ರನ್ ಹಾಗೂ ಐದು ವಿಕೆಟ್ ಗೊಂಚಲು ಪಡೆದಿದ್ದರು.
4: ಅಶ್ವಿನ್ ಅವರು ಒಂದೇ ಟೆಸ್ಟ್ ಪಂದ್ಯದಲ್ಲಿ ನಾಲ್ಕನೇ ಬಾರಿ ಶತಕ ಹಾಗೂ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ. ಕೇವಲ ಇಯಾನ್ ಬೋಥಮ್(5)ಮಾತ್ರ ಅಶ್ವಿನ್ಗಿಂತ ಹೆಚ್ಚು ಬಾರಿ ಈ ಡಬಲ್ ಸಾಧನೆ ಮಾಡಿದ್ದಾರೆ. ಗ್ಯಾರಿ ಸೋಬರ್ಸ್, ಮುಷ್ತಾಕ್ ಮುಹಮ್ಮದ್, ಜಾಕ್ ಕಾಲಿಸ್, ಶಾಕಿಬ್ ಅಲ್ ಹಸನ್ ಹಾಗೂ ರವೀಂದ್ರ ಜಡೇಜ ಎರಡು ಬಾರಿ ಈ ಸಾಧನೆ ಮಾಡಿದ್ದಾರೆ.
7: ಅಶ್ವಿನ್ ಟೆಸ್ಟ್ನ 4ನೇ ಇನಿಂಗ್ಸ್ನಲ್ಲಿ ಏಳನೇ ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ. ಈ ಮೂಲಕ ವಾರ್ನ್ ಹಾಗೂ ಮುರಳೀಧರನ್ರೊಂದಿಗೆ 2ನೇ ಸ್ಥಾನ ಹಂಚಿಕೊಂಡಿದ್ದಾರೆ. 12 ಬಾರಿ ಐದು ವಿಕೆಟ್ ಗುಚ್ಚ ಪಡೆದಿರುವ ಶ್ರೀಲಂಕಾ ಸ್ಪಿನ್ನರ್ ರಂಗನ ಹೆರಾತ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.
12: ರವೀಂದ್ರ ಜಡೇಜ ಅವರು ಟೆಸ್ಟ್ ಪಂದ್ಯದಲ್ಲಿ 12ನೇ ಬಾರಿ 50 ಪ್ಲಸ್ ಸ್ಕೋರ್ ಹಾಗೂ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ. ಕೇವಲ ಬೋಥಮ್(16)ಮಾತ್ರ ಜಡೇಜಗಿಂತ ಹೆಚ್ಚು ಸಲ ಈ ಸಾಧನೆ ಮಾಡಿದ್ದಾರೆ. ಅಶ್ವಿನ್ ಹಾಗೂ ಶಾಕಿಬ್ ತಲಾ 11 ಬಾರಿ ಈ ಸಾಧನೆ ಮಾಡಿದ್ದಾರೆ.
179-178: ಚೆನ್ನೈ ಟೆಸ್ಟ್ ಗೆಲುವಿನ ನಂತರ ಭಾರತವು 179ನೇ ಗೆಲುವು, 178ನೇ ಸೋಲು ಕಂಡಿದೆ. ಭಾರತವು ತನ್ನ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿ ಸೋಲಿಗಿಂತ ಹೆಚ್ಚು ಗೆಲುವು ದಾಖಲಿಸಿದೆ.
632: ರಿಷಭ್ ಪಂತ್ 632 ದಿನಗಳ ನಂತರ ಟೆಸ್ಟ್ ಕ್ರಿಕೆಟಿಗೆ ಪುನರಾಗಮನ ಮಾಡಿದರು. 2022ರಲ್ಲಿ ಬಾಂಗ್ಲಾದೇಶ ವಿರುದ್ಧ ಕೊನೆಯ ಪಂದ್ಯ ಆಡಿದ್ದರು. ಭೀಕರ ಕಾರು ಅಪಘಾತಕ್ಕೆ ಒಳಗಾದ ನಂತರ ಒಂದೂವರೆ ವರ್ಷ ಕ್ರಿಕೆಟ್ನಿಂದ ದೂರ ಉಳಿದಿದ್ದ ಪಂತ್ 2ನೇ ಇನಿಂಗ್ಸ್ನಲ್ಲಿ 109 ರನ್ ಗಳಿಸಿ ಟೆಸ್ಟ್ಗೆ ಯಶಸ್ವಿ ಪುನರಾಗಮನ ಮಾಡಿದ್ದಾರೆ.
1: ಮೊದಲ ಇನಿಂಗ್ಸ್ನಲ್ಲಿ ಶತಕ ಹಾಗೂ 2ನೇ ಇನಿಂಗ್ಸ್ನಲ್ಲಿ ಐದು ವಿಕೆಟ್ ಗೊಂಚಲು ಪಡೆದಿರುವ ಅಶ್ವಿನ್ ಪುರುಷರ ಟೆಸ್ಟ್ ಕ್ರಿಕೆಟ್ನಲ್ಲಿ ಡಬಲ್ ಸಾಧನೆ ಮಾಡಿದ ಮೊದಲ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.
4: ಬಾಂಗ್ಲಾದೇಶ ವಿರುದ್ದ 6 ವಿಕೆಟ್ ಪಡೆದಿರುವ ಅಶ್ವಿನ್ ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ 750 ವಿಕೆಟ್ಗಳನ್ನು ಪಡೆದರು. ಈ ಸಾಧನೆ ಮಾಡಿದ 4ನೇ ಸ್ಪಿನ್ನರ್ ಎನಿಸಿಕೊಂಡರು. ಮುತ್ತಯ್ಯ ಮುರಳೀಧರನ್, ಶೇನ್ ವಾರ್ನ್, ಅನಿಲ್ ಕುಂಬ್ಳೆ ಈ ಸಾಧನೆ ಮಾಡಿದ್ದಾರೆ.
8: ಟೆಸ್ಟ್ನಲ್ಲಿ ಆರು ವಿಕೆಟ್ ಕಬಳಿಸಿರುವ ಅಶ್ವಿನ್ ಸಾರ್ವಕಾಲಿಕ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ 8ನೇ ಸ್ಥಾನಕ್ಕೇರಿದ್ದಾರೆ. ಕೋರ್ಟ್ನಿ ವಾಲ್ಶ್ರ(519)ದಾಖಲೆಯನ್ನು ಮುರಿದರು.
18: ಚೆನ್ನೈ ಟೆಸ್ಟ್ನ ಎರಡು ಇನಿಂಗ್ಸ್ಗಳಲ್ಲಿ ವಿರಾಟ್ ಕೊಹ್ಲಿ 6 ಹಾಗೂ 17 ರನ್ ಗಳಿಸಿದ್ದು ಟೆಸ್ಟ್ನಲ್ಲಿ 2021ರ ನಂತರ ಸ್ಪಿನ್ನರ್ಗಳ ಎದುರು 18 ಬಾರಿ ಔಟಾಗಿದ್ದಾರೆ. ಈ ಅವಧಿಯಲ್ಲಿ 27ರ ಸರಾಸರಿಯಲ್ಲಿ 499 ರನ್ ಗಳಿಸಿದ್ದಾರೆ.