ಪಾಕಿಸ್ತಾನವನ್ನು ಆರು ರನ್ ನಿಂದ ಸೋಲಿಸಿದ ಭಾರತ
ಜಸ್ಪ್ರೀತ್ ಬುಮ್ರಾ ಮಾರಕ ಬೌಲಿಂಗ್
PC : NDTV
ನ್ಯೂಯಾರ್ಕ್: ಐಸಿಸಿ ಟಿ-20 ವಿಶ್ವಕಪ್ ನ ಎ ಗುಂಪಿನ ಪಂದ್ಯದಲ್ಲಿ ಕನಿಷ್ಠ ಮೊತ್ತ ಗಳಿಸಿದ ಹೊರತಾಗಿಯೂ ಭಾರತ ಕ್ರಿಕೆಟ್ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 6 ರನ್ ನಿಂದ ರೋಚಕವಾಗಿ ಮಣಿಸಿದೆ. ಈ ಮೂಲಕ ಟಿ-20 ವಿಶ್ವಕಪ್ ಕ್ರಿಕೆಟ್ ನಲ್ಲಿ ಪಾಕಿಸ್ತಾನ ವಿರುದ್ಧ ಆಡಿರುವ 8ನೇ ಪಂದ್ಯದಲ್ಲಿ 7ನೇ ಗೆಲುವು ದಾಖಲಿಸಿ ಅಜೇಯ ಓಟ ಮುಂದುವರಿಸಿದೆ.
ರವಿವಾರ ಮಳೆ ಬಾಧಿತ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತವು ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಏಕಾಂಗಿ ಹೋರಾಟದ(42 ರನ್, 31 ಎಸೆತ)ನೆರವಿನಿಂದ 19 ಓವರ್ ಗಳಲ್ಲಿ 119 ರನ್ ಗೆ ಆಲೌಟಾಯಿತು. ವೇಗಿಗಳಾದ ನಸೀಂ ಶಾ(3-21)ಹಾಗೂ ಹಾರಿಸ್ ರವೂಫ್(3-21) ರೋಹಿತ್ ಶರ್ಮಾ ಬಳಗವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿದರು.
ಗೆಲ್ಲಲು 120 ರನ್ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡವು ವೇಗಿ ಜಸ್ಪ್ರೀತ್ ಬುಮ್ರಾ(3-14)ನೇತೃತ್ವದ ಭಾರತದ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿ 7 ವಿಕೆಟ್ ಗಳ ನಷ್ಟಕ್ಕೆ 113 ರನ್ ಗಳಿಸಲಷ್ಟೇ ಶಕ್ತವಾಯಿತು. ಬುಮ್ರಾಗೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ(2-24), ಅಕ್ಷರ್ ಪಟೇಲ್(1-11) ಹಾಗೂ ಅರ್ಷದೀಪ್ ಸಿಂಗ್(1-31)ಸಾಥ್ ನೀಡಿದರು. ಬ್ಯಾಟಿಂಗ್ ನಲ್ಲಿ ಮಿಂಚಿದ್ದ ಪಂತ್ ಕೆಲವು ಆಕರ್ಷಕ ಕ್ಯಾಚ್ ಮೂಲಕವೂ ಗಮನ ಸೆಳೆದರು.
ಅಮೆರಿಕ ವಿರುದ್ಧ ಮೊದಲ ಪಂದ್ಯದಲ್ಲಿ ಎಡವಿದ್ದ್ದ ಪಾಕಿಸ್ತಾನ ಟೂರ್ನಿಯಲ್ಲಿ ಸತತ ಎರಡನೇ ಸೋಲು ಕಂಡಿದೆ. ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾದ ಪಾಕ್ ಪರ ಆರಂಭಿಕ ಬ್ಯಾಟರ್ ಮುಹಮ್ಮದ್ ರಿಝ್ವಾನ್(31 ರನ್, 44 ಎಸೆತ, 1 ಬೌಂಡರಿ, 1 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿ ಗೆಲುವಿನ ವಿಶ್ವಾಸ ಮೂಡಿಸಿದರು. ಆದರೆ ಇಮಾದ್ ವಸೀಂ(15 ರನ್, 23 ಎಸೆತ)ಹೊರತುಪಡಿಸಿ ಉಳಿದ ಬ್ಯಾಟರ್ಗಳು ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು.
ನಾಯಕ ಬಾಬರ್ ಆಝಮ್(13 ರನ್), ಉಸ್ಮಾನ್ ಖಾನ್(13 ರನ್), ಫಖರ್ ಝಮಾನ್ (13 ರನ್)ತಲಾ 13 ರನ್ ಗಳಿಸಿದರು.ಬಾಲಂಗೋಚಿ ನಸೀಂ ಶಾ 4 ಎಸೆತಗಳಲ್ಲಿ 2 ಬೌಂಡರಿ ಸಹಿತ ಔಟಾಗದೆ 10 ರನ್ ಗಳಿಸಿದರು.
ರಿಝ್ವಾನ್ ಹಾಗೂ ಉಸ್ಮಾನ್ 2ನೇ ವಿಕೆಟ್ಗೆ 31 ರನ್ ಸೇರಿಸಿದರು. ಇದು ಪಾಕ್ ಇನಿಂಗ್ಸ್ನಲ್ಲಿ ದಾಖಲಾದ ಗರಿಷ್ಠ ಜೊತೆಯಾಟವಾಗಿದೆ.
ಅಮೆರಿಕ ವಿರುದ್ಧ ಮೊದಲ ಪಂದ್ಯವನ್ನು ಸೂಪರ್ ಓವರ್ನಲ್ಲಿ ಸೋತಿರುವ ಪಾಕಿಸ್ತಾನದ ಸೂಪರ್-8 ಹಾದಿ ಕಠಿಣವಾಗಿದೆ.