ನಾಳೆ ಭಾರತ-ಇಂಗ್ಲೆಂಡ್ 3ನೇ ಟಿ20 | ಆತಿಥೇಯರಿಗೆ ಕ್ಷಿಪ್ರವಾಗಿ ಸರಣಿ ಗೆಲ್ಲುವ ಧಾವಂತ
ಭಾರತ-ಇಂಗ್ಲೆಂಡ್ ಕ್ರಿಕೆಟ್ ತಂಡ | PTI
ರಾಜ್ಕೋಟ್: ಪ್ರವಾಸಿ ಇಂಗ್ಲೆಂಡ್ ಮತ್ತು ಭಾರತ ತಂಡಗಳ ನಡುವಿನ ಟಿ20 ಸರಣಿಯ ಮೂರನೇ ಪಂದ್ಯವು ಮಂಗಳವಾರ ಗುಜರಾತ್ನ ರಾಜ್ಕೋಟ್ನಲ್ಲಿ ನಡೆಯಲಿದೆ. ಈಗಾಗಲೇ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತವು ನಾಳಿನ ಪಂದ್ಯವನ್ನೂ ಗೆಲ್ಲುವ ಮೂಲಕ ಐದು ಪಂದ್ಯಗಳ ಸರಣಿಯನ್ನು ಕ್ಷಿಪ್ರವಾಗಿ ಗೆಲ್ಲುವ ಉತ್ಸಾಹದಲ್ಲಿದೆ.
ಕೋಲ್ಕತಾದ ಈಡನ್ ಗಾರ್ಡನ್ನಲ್ಲಿ ನಡೆದಿರುವ ಮೊದಲ ಪಂದ್ಯವನ್ನು ಭಾರತವು ಏಳು ವಿಕೆಟ್ಗಳಿಂದ ಸುಲಭವಾಗಿ ಗೆದ್ದಿದೆ. ಆದರೆ, ಚೆನ್ನೈಯಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಗೆಲುವಿವಾಗಿ ಭಾರತ ಕೊಂಚ ಶ್ರಮ ಪಡಬೇಕಾಯಿತು. ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ತಿಲಕ್ ವರ್ಮಾ ಭಾರತವನ್ನು ಗೆಲುವಿನ ದಡಕ್ಕೆ ಸೇರಿಸಿದರು.
ಸರಣಿಯನ್ನು ಜೀವಂತವಾಗಿರಿಸಲು ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ತಂಡವು ತೀವ್ರ ಪ್ರತಿ ಹೋರಾಟವನ್ನು ನೀಡಬೇಕಾಗಿದೆ.
ಮೂರನೇ ಕ್ರಮಾಂಕದಲ್ಲಿ ಆಡುವ ತಿಲಕ್ ವರ್ಮಾ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಶನಿವಾರ ಅವರು 55 ಎಸೆತಗಳಲ್ಲಿ 72 ರನ್ಗಳನ್ನು ಗಳಿಸಿದ್ದಾರೆ ಮತ್ತು ಭಾರತವನ್ನು ಸಂಕಷ್ಟದ ಸ್ಥಿತಿಯಿಂದ ವಿಜಯದತ್ತ ಮುನ್ನಡೆಸಿದ್ದಾರೆ. ಅವರು ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ರನ್ನು ಎದುರಿಸಿದ ರೀತಿಯು ಅವರ ಇನಿಂಗ್ಸ್ನ ಮುಖ್ಯಾಂಶವಾಗಿತ್ತು. ಅವರು ಜೋಫ್ರಾರ ಒಂಭತ್ತು ಎಸೆತಗಳನ್ನು ಎದುರಿಸಿ 30 ರನ್ಗಳನ್ನು ಸಿಡಿಸಿದರು.
ಇಂಗ್ಲೆಂಡ್ ತಂಡದ ಯಶಸ್ಸು ಅದರ ನಾಯಕ ಜೋಸ್ ಬಟ್ಲರ್ರ ನಿರ್ವಹಣೆಯನ್ನು ಅವಲಂಬಿಸಿದೆ. ಎರಡೂ ಪಂದ್ಯಗಳಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಲಿಳಿದ 34 ವರ್ಷದ ಆಟಗಾರ ತಂಡದ ಶ್ರೇಷ್ಠ ಬ್ಯಾಟರ್ ಆಗಿದ್ದರು. ಅವರು ಮೊದಲ ಎರಡು ಪಂದ್ಯಗಳಲ್ಲಿ ಕ್ರಮವಾಗಿ 68 ಮತ್ತು 45 ರನ್ಗಳನ್ನು ಗಳಿಸಿದ್ದಾರೆ. ಅವರು ತನ್ನ ಅತ್ಯುತ್ತಮ ಫಾರ್ಮನ್ನು ಮುಂದುವರಿಸಿ ತಂಡವನ್ನು ಸರಣಿ ಸೋಲಿನ ದವಡೆಯಿಂದ ಪಾರು ಮಾಡಲು ಯತ್ನಿಸುವುದು ಖಚಿತ. ಈ ಕಾರ್ಯದಲ್ಲಿ ಅವರಿಗೆ ಇತರ ಬ್ಯಾಟರ್ಗಳ ನೆರವು ಸಿಕ್ಕರೆ ಅವರು ಯಶಸ್ವಿಯಾಗುವ ಸಾಧ್ಯತೆಯಿದೆ.
ತಂಡಗಳು
ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಶೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ಕೀಪರ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ಅರ್ಶದೀಪ್ ಸಿಂಗ್, ಮುಹಮ್ಮದ್ ಶಮಿ, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ವಾಶಿಂಗ್ಟನ್ ಸುಂದರ್ ಮತ್ತು ಧ್ರುವ ಜೂರೆಲ್ (ವಿಕೆಟ್ಕೀಪರ್).
ಇಂಗ್ಲೆಂಡ್: ಜೋಸ್ ಬಟ್ಲರ್ (ನಾಯಕ), ಹ್ಯಾರಿ ಬ್ರೂಕ್ (ಉಪ ನಾಯಕ), ಫಿಲ್ ಸಾಲ್ಟ್ (ವಿಕೆಟ್ಕೀಪರ್), ಜಾಕೋಬ್ ಬೆತೆಲ್, ಲಿಯಮ್ ಲಿವಿಂಗ್ಸ್ಟೋನ್, ಜೋಫ್ರಾ ಆರ್ಚರ್, ಗಸ್ ಆ್ಯಟ್ಕಿನ್ಸನ್, ಬೆನ್ ಡಕೆಟ್, ಜೇಮೀ ಓವರ್ಟನ್, ಆದಿಲ್ ರಶೀದ್ ಮತ್ತು ಮಾರ್ಕ್ ವುಡ್.
ಪಂದ್ಯ ಆರಂಭ: ಸಂಜೆ 7 ಗಂಟೆ