ಭಾರತ-ಇಂಗ್ಲೆಂಡ್ ಏಕದಿನ ಪಂದ್ಯ: ಶ್ರೇಯಸ್ ಅಯ್ಯರ್ ಗೆ ರೋಹಿತ್ ಶರ್ಮಾ ಕರೆ ಮಾಡಿ ಹೇಳಿದ್ದೇನು?

PC: x.com/ShreyasIyer
ದೆಹಲಿ: ಚಲನಚಿತ್ರ ವೀಕ್ಷಿಸುತ್ತಿದ್ದ ಶ್ರೇಯಸ್ ಅಯ್ಯರ್ ಗೆ ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರಿಂದ ದಿಢೀರ್ ಕರೆ ಬಂದು ವಿರಾಟ್ ಕೊಹ್ಲಿ ಬದಲು ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಡಬೇಕು ಎಂದು ಸೂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಪ್ರವಾಸಿ ಇಂಗ್ಲೆಂಡ್ ನಿಗದಿಪಡಿಸಿದ ಗುರಿಯನ್ನು ಬೆನ್ನಟ್ಟುವ ನಿಟ್ಟಿನಲ್ಲಿ ದೇಶಿ ಕ್ರಿಕೆಟ್ನ ತಮ್ಮ ಅನುಭವವನ್ನು ಒರೆಗೆ ಹಚ್ಚಿ 19ನೇ ಏಕದಿನ ಅರ್ಧಶತಕ ದಾಖಲಿಸುವ ಮೂಲಕ ಅಯ್ಯರ್ ತಮ್ಮ ಸ್ಥಾನವನ್ನು ಯಶಸ್ವಿಯಾಗಿ ನಿಭಾಯಿಸಿದರು. 249 ರನ್ಗಳ ಗುರಿ ಬೆನ್ನಟ್ಟುವ ಸಂದರ್ಭದಲ್ಲಿ 19 ರನ್ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಭಾರತ ಸಂಕಷ್ಟದಲ್ಲಿದ್ದಾಗ ಅಯ್ಯರ್ ಎರಡು ಸಿಕ್ಸರ್ ಮತ್ತು ಒಂಬತ್ತು ಬೌಂಡರಿಗಳ ಸಹಿತ ಕೇವಲ 36 ಎಸೆತಗಳಲ್ಲಿ 59 ರನ್ ಸಿಡಿಸಿ, ಭಾರತವನ್ನು ಗೆಲುವಿನ ಹಳಿಗೆ ಮರಳಿಸಿದರು.
"ಇದು ಒಂದು ವಿನೋದದ ಕಥೆ. ನಿನ್ನೆ ರಾತ್ರಿ ನಾನು ಮೂವಿ ನೋಡುತ್ತಿದ್ದೆ. ತಡರಾತ್ರಿವರೆಗೂ ನೋಡಲು ಬಯಸಿದ್ದೆ. ಆಗ ನಾಯಕ ರೋಹಿತ್ ಶರ್ಮಾ ಅವರಿಂದ ಕರೆ ಬಂದು, ಕೊಹ್ಲಿಯವರಿಗೆ ಮೊಣಗಾಲು ಊದಿಕೊಂಡಿರುವುದರಿಂದ ನಾಳಿನ ಪಂದ್ಯ ಆಡಬೇಕು ಎಂಬ ಸೂಚನೆ ಬಂತು" ಎಂದು ಅಯ್ಯರ್ ಸ್ಟಾರ್ ಸ್ಪೋರ್ಟ್ಸ್ ಜತೆ ಮಾತನಾಡುವ ವೇಳೆ ಬಹಿರಂಗಪಡಿಸಿದರು.
"ಆಗ ಆತುರದಿಂದ ಕೊಠಡಿಗೆ ಮರಳಿ ನೇರವಾಗಿ ನಿದ್ದೆಗೆ ಜಾರಿದೆ. ಸದ್ದುಗದ್ದಲವಿಲ್ಲದೇ ಈ ವಿಜಯದ ಕ್ಷಣವನ್ನು ಆನಂದಿಸುತ್ತಿದ್ದೇನೆ" ಎಂದರು. "ನಾನು ಮೊದಲ ಪಂದ್ಯ ಆಡುವ ಯೋಜನೆ ಇರಲಿಲ್ಲ. ದುರದೃಷ್ಟವಶಾತ್ ವಿರಾಟ್ ಗಾಯಗೊಂಡರು; ಇದರಿಂದ ನನಗೆ ಅವಕಾಶ ಸಿಕ್ಕಿತು. ಆದರೆ ನಾನು ಎಲ್ಲದಕ್ಕೂ ಸಜ್ಜಾಗಿದ್ದೆ. ಆಡಲು ಯಾವುದೇ ಕ್ಷಣದಲ್ಲಿ ನನಗೆ ಅವಕಾಶ ಸಿಗಬಹುದು ಎಂದು ನನಗೆ ತಿಳಿದಿತ್ತು" ಎಂದು ಹೇಳಿದರು.
"ಕಳೆದ ವರ್ಷ ಏಷ್ಯಾ ಕಪ್ ಪಂದ್ಯದ ವೇಳೆ ನನಗೂ ಇಂಥದ್ದೇ ಪರಿಸ್ಥಿತಿ ಎದುರಾಗಿತ್ತು. ನನಗೆ ಗಾಯವಾಗಿದ್ದರಿಂದ ಬೇರೆಯವರು ನನ್ನ ಸ್ಥಾನದಲ್ಲಿ ಅವಕಾಶ ಪಡೆದು ಶತಕ ಹೊಡೆದರು" ಎಂದು ನೆನಪಿಸಿಕೊಂಡರು. ಐಪಿಎಲ್ಗಾಗಿ ದೇಶಿ ಕ್ರಿಕೆಟನ್ನು ಕಡೆಗಣಿಸುತ್ತಿದ್ದಾರೆ ಎಂಬ ಅಪವಾದ ಅಯ್ಯರ್ ಮೇಲೆ ಕೇಳಿಬಂದಿದ್ದು, ಆ ಬಗ್ಗೆ ಪ್ರಸ್ತಾವಿಸಿ, ಕಳೆದ ವರ್ಷದ ಅನುಭವ ತಮ್ಮ ಫಿಟ್ನೆಸ್ ಮತ್ತು ಫಾರ್ಮ್ಗೆ ಕಾರಣ ಎಂದು ವಿಶ್ಲೇಷಿಸಿದರು.