ಇಂಡಿಯಾ ಕಾ ಬ್ಯಾಟಿಂಗ್ ಕೋಚ್ ಕೌನ್ ಹೇ? : ಬಾಸಿತ್ ಅಲಿ ವ್ಯಂಗ್ಯ
ಬಾಸಿತ್ ಅಲಿ PC: screengrab/youtube
ಹೊಸದಿಲ್ಲಿ: ನ್ಯೂಝಿಲೆಂಡ್ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ 0-3 ಅಂತರದ ಹೀನಾಯ ಸೋಲು ಅನುಭವಿಸಿದ ಭಾರತ ತಂಡದ ಬ್ಯಾಟಿಂಗ್ ಬಲದ ವಿರುದ್ಧ ವಿಶ್ವಾದ್ಯಂತ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಮುಖ್ಯವಾಗಿ ಕೆಂಪು ಚೆಂಡಿನ ಕ್ರಿಕೆಟ್ ನಲ್ಲಿ ಭಾರತೀಯ ಬ್ಯಾಟರ್ ಗಳ ಅತಿಯಾದ ಆಕ್ರಮಣಕಾರಿ ಪ್ರವೃತ್ತಿ, ಪಿಚ್ ಗಳ ಸ್ವರೂಪದ ಬಗ್ಗೆ ಚರ್ಚೆಗಳು ಹುಟ್ಟಿಕೊಂಡಿವೆ. ಯುವ ಆಟಗಾರರಿಗೆ ಮಾರ್ಗದರ್ಶನ ನೀಡುವಲ್ಲಿ ಬ್ಯಾಟಿಂಗ್ ಕೋಚ್ ವಿಫಲರಾಗಿದ್ದಾರೆ ಎಂದು ಪಾಕಿಸ್ತಾನದ ಖ್ಯಾತ ಬ್ಯಾಟ್ಸ್ ಮನ್ ಬಾಸಿತ್ ಅಲಿ ಬೊಟ್ಟು ಮಾಡಿದ್ದಾರೆ.
ನ್ಯೂಝಿಲೆಂಡ್ ವಿಜಯದಲ್ಲಿ ಸ್ಪಿನ್ನರ್ ಗಳಾದ ಮಿಚೆಲ್ ಸ್ಯಾಂಟರ್ ಮತ್ತು ಅಜಾಝ್ ಪಟೇಲ್ ಪ್ರಮುಖ ಪಾತ್ರ ವಹಿಸಿದ್ದರು. ಸ್ಯಾಂಟರ್ ಪುಣೆ ಟೆಸ್ಟ್ ನಲ್ಲಿ 13 ವಿಕೆಟ್ ಕಬಳಿಸಿ ಭಾರತದ ಬೆನ್ನೆಲುಬು ಮುರಿದರೆ, ಮುಂಬೈನಲ್ಲಿ ಪಟೇಲ್ 11 ವಿಕೆಟ್ ಕಿತ್ತಿದ್ದರು.
"ಇಂಡಿಯಾ ಕಾ ಬ್ಯಾಟಿಂಗ್ ಕೋಚ್ ಹೈ ಕೌನ್, ಜೋ ಯೆಹ್ ನಹಿ ಬಾಟಾ ಪಾ ರಹಾ ಕಿ ಟೆಸ್ಟ್ ಕ್ರಿಕೆಟ್ ಸೆಷನ್ ಟೂ ಸೆಷನ್ ಹೋತಿ ಹೈ? ಬಸ್ ಹರ್ ಓವರ್ 12 ರನ್ ಬನಾ ಲೋ 10 ರನ್ ಬನಾ ಲೋ. ಯೆಹ್ ಕೋಯಿ ಕ್ರಿಕೆಟ್ ಹೈ ಯಾರ್! (ಭಾರತದ ಬ್ಯಾಟಿಂಗ್ ಕೋಚ್ ಯಾರು, ಸೆಷನ್ನಿಂದ ಸೆಷನ್ ಗೆ ಯುವ ಬ್ಯಾಟ್ಸ್ ಮನ್ ಗಳಿಗೆ ಸಲಹೆ ನೀಡುವಲ್ಲಿ ವಿಫಲರಾಗಿದ್ದಾರೆ. ಪ್ರತಿ ಓವರ್ ನಲ್ಲಿ 10-12 ರನ್ ಗಳನ್ನು ಗಳಿಸಲು ಪ್ರಯತ್ನಿಸುವುದು ಕ್ರಿಕೆಟ್ ಅಲ್ಲ" ಎಂದು ಯೂ ಟ್ಯೂಬ್ ಚಾನಲ್ ನಲ್ಲಿ ಪೋಸ್ಟ್ ಮಾಡಿರುವ ವಿಡಿಯೊದಲ್ಲಿ ಅಲಿ ವ್ಯಂಗ್ಯವಾಡಿದ್ದಾರೆ.
ಶುಭಮನ್ ಗಿಲ್ ಮುಂಬೈ ಟೆಸ್ಟ್ ನ ಮೊದಲ ಇನಿಂಗ್ಸ್ ನಲ್ಲಿ 90 ರನ್ ಗಳಿಸಿದ್ದರೆ, ಎರಡನೇ ಇನ್ನಿಂಗ್ಸ್ ನಲ್ಲಿ ಕೇವಲ 1 ರನ್ ಕೊಡುಗೆ ನೀಡಿದ್ದರು. ಯಶಸ್ವಿ ಜೈಸ್ವಾಲ್ ಮೊದಲ ಇನಿಂಗ್ಸ್ ನಲ್ಲಿ ಎಚ್ಚರಿಕೆಯಿಂದ ಆಡಿ 30 ರನ್ ಗಳಿಸಿದರೆ, ರಿವರ್ಸ್ ಸ್ವೀಪ್ಗೆ ವಿಕೆಟ್ ಒಪ್ಪಿಸಿದ್ದರು.
ಜೈಸ್ವಾಲ್ ಹಾಗೂ ಗಿಲ್ ಅಂಥವರಿಗೆ 30-35 ರನ್ ತಲುಪಿದ ಬಳಿಕ ಲೂಸ್ ಶಾಟ್ ಗಳ ಮೂಲಕ ವಿಕೆಟ್ ಒಪ್ಪಿಸಬೇಡಿ, ಇಡೀ ಸೆಷನ್ ಆಡಿ ಎಂದು ಸಲಹೆ ನೀಡಲು ಯಾರೂ ಇಲ್ಲವೇ? ಏಕೆಂದರೆ ಪಿಚ್ ಲಯ ಕಂಡುಕೊಂಡ ಬ್ಯಾಟರ್ ಮಾತ್ರ ಯಶಸ್ವಿಯಾಗಬಲ್ಲ. ಅ ಸಮಯಕ್ಕೆ ಆತ ನಿಮ್ಮ ಬ್ರಾಡ್ಮನ್ ಎಂದು ಅಲಿ ವಿಶ್ಲೇಷಿಸಿದ್ದಾರೆ.