ಶುಕ್ರವಾರದಿಂದ ಭಾರತ - ಕಿವೀಸ್ 3ನೇ ಟೆಸ್ಟ್ | ಪ್ರವಾಸಿಗರ ಕ್ಲೀನ್ ಸ್ವೀಪ್ ಯತ್ನವನ್ನು ತಡೆಯುವರೇ ಆತಿಥೇಯರು?
ಮುಂಬೈ : ಪ್ರವಾಸಿ ನ್ಯೂಝಿಲ್ಯಾಂಡ್ ಮತ್ತು ಭಾರತ ತಂಡಗಳ ನಡುವಿನ ಟೆಸ್ಟ್ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯ ಮುಂಬೈಯ ವಾಂಖೇಡೆ ಸ್ಟೇಡಿಯಮ್ ನಲ್ಲಿ ಶುಕ್ರವಾರ ಆರಂಭಗೊಳ್ಳಲಿದೆ.
ನ್ಯೂಝಿಲ್ಯಾಂಡ್ ಮೊದಲ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಟೆಸ್ಟ್ ಸರಣಿಯನ್ನು ಈಗಾಗಲೇ ಗೆದ್ದಿದೆ. ಕೊನೆಯ ಪಂದ್ಯವನ್ನಾದರೂ ಗೆದ್ದು ಸರಣಿ ಸೋಲಿನ ಅಂತರವನ್ನು ಕಡಿಮೆ ಮಾಡಿಕೊಳ್ಳುವ ಅವಕಾಶ ಈಗ ಭಾರತಕ್ಕೆ ಇದೆ.
ಅಂತಿಮ ಟೆಸ್ಟ್ ಗೆ ಭಾರತವು ಸಿದ್ಧತೆಗಳನ್ನು ನಡೆಸುತ್ತಿರುವಂತೆಯೇ, ತನ್ನ ಆಡುವ 11ರ ಬಳಗವನ್ನು ಭಾರತ ಉಳಿಸಿಕೊಳ್ಳುತ್ತದೆಯೇ ಅಥವಾ ತಂಡದಲ್ಲಿ ಕೆ.ಎಲ್. ರಾಹುಲ್ ಗೆ ಅವಕಾಶವೊಂದನ್ನು ನೀಡುತ್ತದೆಯೇ ಎನ್ನುವ ಬಗ್ಗೆ ಊಹಾಪೋಹಗಳಿವೆ.
ರಾಹುಲ್ ರ ಅನುಭವ ಮತ್ತು ಹಿಂದಿನ ನಿರ್ವಹಣೆಯನ್ನು ಪರಿಗಣಿಸಿ ಅವರನ್ನು ತಂಡಕ್ಕೆ ವಾಪಸ್ ಕರೆಸಿಕೊಳ್ಳುವ ಸಾಧ್ಯತೆಗಳಿವೆ. ಆಡುವ 11ರ ಬಳಗದಲ್ಲಿ ಏನಾದರೂ ಬದಲಾವಣೆ ಮಾಡಲು ತಂಡಾಡಳಿತವು ತೀರ್ಮಾನಿಸಿದರೆ, ಹಿಂದಿನ ಎರಡು ಪಂದ್ಯಗಳ ವೈಫಲ್ಯವನ್ನು ಗಮನದಲ್ಲಿರಿಸಿಕೊಂಡು ಅದು ವ್ಯೆಹಾತ್ಮಕ ನಿರ್ಧಾರವೊಂದನ್ನು ತೆಗೆದುಕೊಳ್ಳಬೇಕಾಗುತ್ತದೆ. ಮುಖ್ಯವಾಗಿ ಬ್ಯಾಟಿಂಗ್ ವಿಭಾಗವನ್ನು ಬಲಪಡಿಸುವ ನಿಟ್ಟಿನಲ್ಲಿ ಅದು ಕ್ರಮ ತೆಗೆದುಕೊಳ್ಳುವುದು ಅಗತ್ಯವಾಗುತ್ತದೆ.
ಆಡುವ 11ರ ಬಳಗದಲ್ಲಿ ರಾಹುಲ್ ಗೆ ಸ್ಥಾನ ಕಲ್ಪಿಸಲು ಪ್ರಧಾನ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ರೋಹಿತ್ ಶರ್ಮ ಯಾರನ್ನು ಕೈಬಿಡುತ್ತಾರೆ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಮೊದಲ ಟೆಸ್ಟ್ನಲ್ಲಿ ರಾಹುಲ್ ರ ನಿರ್ವಹಣೆ ತೀರಾ ಕಳಪೆಯಾಗಿತ್ತು. ಮೊದಲ ಇನಿಂಗ್ಸ್ ನಲ್ಲಿ ಸೊನ್ನೆಗೆ ಔಟಾದ ಐವರು ಬ್ಯಾಟರ್ ಗಳ ಪೈಕಿ ಅವರೂ ಒಬ್ಬರಾಗಿದ್ದರು. ಆ ಟೆಸ್ಟ್ನಲ್ಲಿ ಭಾರತದ ಮೊದಲ ಇನಿಂಗ್ಸ್ 46ಕ್ಕೆ ಮುಕ್ತಾಯಗೊಂಡಿತ್ತು. ಅದು ಟೆಸ್ಟ್ಗಳಲ್ಲಿ ಭಾರತದ ಮೂರನೇ ಅತಿ ಕಡಿಮೆ ಮೊತ್ತವಾಗಿತ್ತು. ಎರಡನೇ ಇನಿಂಗ್ಸ್ನಲ್ಲಿ ರಾಹುಲ್ 12 ರನ್ ಗಳನ್ನು ಗಳಿಸಿದ್ದರು.
ಎರಡನೇ ಟೆಸ್ಟ್ನಲ್ಲಿ ಆಡುವ ಅವಕಾಶ ಪಡೆದಿರುವ ವಾಶಿಂಗ್ಟನ್ ಸುಂದರ್ ತನ್ನ ಟೆಸ್ಟ್ ಕ್ರೀಡಾ ಬದುಕಿನಲ್ಲಿ ಮೈಲಿಗಲ್ಲಿಯೊಂದನ್ನು ಸ್ಥಾಪಿಸಿದ್ದಾರೆ. ಅವರು ನ್ಯೂಝಿಲ್ಯಾಂಡ್ ವಿರುದ್ಧ ತನ್ನ ಮೊದಲ 10 ವಿಕೆಟ್ ಗೊಂಚಿಲು ಪಡೆದಿದ್ದಾರೆ. ಮೊದಲ ಟೆಸ್ಟ್ನಿಂದ ಹೊರಗಿದ್ದ ಸುಂದರ್, ಎರಡನೇ ಟೆಸ್ಟ್ನಲ್ಲಿ ಪ್ರಬಲ ನಿರ್ವಹಣೆ ನೀಡಿದ್ದಾರೆ. ಮೊದಲ ಇನಿಂಗ್ಸ್ನಲ್ಲಿ ಏಳು ವಿಕೆಟ್ ಪಡೆದರೆ, ಎರಡನೇ ಇನಿಂಗ್ಸ್ನಲ್ಲಿ ಮೂರು ವಿಕೆಟ್ಗಳನ್ನು ಉರುಳಿಸಿದ್ದಾರೆ.
ಆದರೆ, ಆಡುವ 11ರ ಬಳಗದಲ್ಲಿ ಈ ಹಂತದಲ್ಲಿ ಬದಲಾವಣೆ ಮಾಡುವುದು ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಬಹುದಾಗಿದೆ. ನಿರಂತರ ಮೂರು ಟೆಸ್ಟ್ ಸೋಲುಗಳನ್ನು ಹೊತ್ತುಕೊಂಡು ಭಾರತವು ಆಸ್ಟ್ರೇಲಿಯ ಪ್ರವಾಸ ಕೈಗೊಳ್ಳಲು ಮುಂದಾಗಲಾರದು.
ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟನ್ನು ನ್ಯೂಝಿಲ್ಯಾಂಡ್ 8 ವಿಕೆಟ್ಗಳಿಂದ ಗೆದ್ದರೆ, ಪುಣೆಯಲ್ಲಿ ನಡೆದ ಎರಡನೇ ಟೆಸ್ಟ ನ್ನು ಅದು 113 ರನ್ ಗಳಿಂದ ಜಯಿಸಿದೆ. ಆ ಮೂಲಕ ಭಾರತೀಯ ನೆಲದಲ್ಲಿ ತನ್ನ ಚೊಚ್ಚಲ ಟೆಸ್ಟ್ ಸರಣಿಯನ್ನು ಗೆದ್ದಿದೆ.
ಅದೇ ವೇಳೆ, ಭಾರತವು 12 ವರ್ಷಗಳಲ್ಲೇ ಮೊದಲ ಬಾರಿಗೆ ತಾಯ್ನೆಲದಲ್ಲಿ ಟೆಸ್ಟ್ ಸರಣಿಯೊಂದನ್ನು ಕಳೆದುಕೊಂಡಿತು.
ಇನ್ನೊಂದೆಡೆ, ಈಗಾಗಲೇ ಸರಣಿ ಗೆದ್ದು ಆತ್ಮವಿಶ್ವಾಸದಿಂದ ತುಂಬಿ ತುಳುಕುತ್ತಿರುವ ಟಾಮ್ ಲ್ಯಾತಮ್ ಬಳಗವು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಭಾರತ ತನ್ನದೇ ನೆಲದಲ್ಲಿ ಈವರೆಗೆ ಒಮ್ಮೆ ಮಾತ್ರ ಕ್ಲೀನ್ ಸ್ವೀಪ್ ಆಗಿದೆ. 1999-2000ದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕವು ಭಾರತದ ವಿರುದ್ಧದ ಎರಡು ಟೆಸ್ಟ್ಗಳ ಸರಣಿಯನ್ನು ಕ್ಲೀನ್ ಸ್ವೀಪ್ಗೈದಿತ್ತು.
ಸರಣಿಯನ್ನು ನ್ಯೂಝಿಲ್ಯಾಂಡ್ ಈಗಾಗಲೇ ಗೆದ್ದಿರುವುದರಿಂದ ಈ ಟೆಸ್ಟ್ಗೆ ಮಹತ್ವವಿಲ್ಲ ಎಂಬಂತೆ ಮೇಲ್ನೋಟಕ್ಕೆ ಕಾಣುತ್ತದೆ. ಆದರೆ, ಮುಂಬರುವ ಆಸ್ಟ್ರೇಲಿಯ ಪ್ರವಾಸವನ್ನು ಗಮನದಲ್ಲಿಟ್ಟುಕೊಂಡರೆ, ಈ ಪಂದ್ಯಕ್ಕೆ ಅಗಾಧ ಮಹತ್ವವಿದೆ.
ಸಂಭಾವ್ಯ ತಂಡಗಳು
ಭಾರತ: ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮ (ನಾಯಕ), ಕೆ.ಎಲ್. ರಾಹುಲ್, ಶುಬಮನ್ ಗಿಲ್, ವಿರಾಟ್ ಕೊಹ್ಲಿ, ರಿಶಭ್ ಪಂತ್ (ವಿಕೆಟ್ ಕೀಪರ್), ಸರ್ಫರಾಝ್ ಖಾನ್, ರವೀಂದ್ರ ಜಡೇಜ, ಆರ್. ಅಶ್ವಿನ್, ವಾಶಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರ, ಕುಲದೀಪ್ ಯಾದವ್, ಮುಹಮ್ಮದ್ ಸಿರಾಜ್, ಆಕಾಶ್ ದೀಪ್.
ನ್ಯೂಝಿಲ್ಯಾಂಡ್: ಟಾಮ್ ಲ್ಯಾತಮ್ (ನಾಯಕ), ಡೇವನ್ ಕಾನ್ವೆ, ವಿಲ್ ಯಂಗ್, ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟನರ್, ಮ್ಯಾಟ್ ಹೆನ್ರಿ, ಅಜಾಝ್ ಪಟೇಲ್ ಮತ್ತು ವಿಲಿಯಮ್ ಒ’ರೂರ್ಕಿ.
ಪಂದ್ಯ ಆರಂಭ: ಬೆಳಗ್ಗೆ 9:30