ಭಾರತ ವಿರುದ್ಧ ಐತಿಹಾಸಿಕ ಕ್ಲೀನ್ ಸ್ವೀಪ್ ಸಾಧನೆ ಮಾಡಿದ ನ್ಯೂಝಿಲ್ಯಾಂಡ್
ಅಲ್ಪ ಮೊತ್ತದ ಗುರಿ ಬೆನ್ನತ್ತಲು ವಿಫಲವಾದ ರೋಹಿತ್ ಪಡೆ
Photo:X/@BLACKCAPS
ಮುಂಬೈ: ಕೇವಲ 147 ರನ್ ಗಳ ಗೆಲುವಿನ ಗುರಿ ಬೆನ್ನಿಟ್ಟಿದ್ದ ಭಾರತ ತಂಡ, ಅಜಾಝ್ ಪಟೇಲ್ ರ ಸ್ಪಿನ್ ಮೋಡಿಯೆದುರು ತರಗೆಲೆಯಂತಾಗಿ 26 ರನ್ ಗಳ ಅಂತರದಲ್ಲಿ ಪರಾಜಯಗೊಂಡಿದೆ. ಈ ಮೂಲಕ ನ್ಯೂಝಿಲ್ಯಾಂಡ್ ಐತಿಹಾಸಿಕ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.
147 ರನ್ ಗಳ ಅಲ್ಪ ಮೊತ್ತದ ಗೆಲುವಿನ ಗುರಿ ಬೆನ್ನಟ್ಟಿದ ಭಾರತ ತಂಡ, ಯಾವ ಹಂತದಲ್ಲೂ ಗೆಲುವಿನ ಗುರಿ ತಲುಪುವ ಸಾಧ್ಯತೆಯನ್ನೇ ಪ್ರದರ್ಶಿಸಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಪ್ರತಿರೋಧ ತೋರಿದ್ದು ಹೊರತುಪಡಿಸಿ, ಉಳಿದೆಲ್ಲ ಬ್ಯಾಟರ್ ಗಳೂ ಪೆವಿಲಿಯನ್ ಪೆರೇಡ್ ನಡೆಸಿದರು.
ಮೊದಲ ಇನಿಂಗ್ಸ್ ನಲ್ಲಿ ನ್ಯೂಝಿಲೆಂಡ್ ತಂಡದ ಪರ ಐದು ವಿಕೆಟ್ ಕಿತ್ತು ಭಾರತ ತಂಡದ ನಡು ಮುರಿದಿದ್ದ ಎಡಗೈ ಸ್ಪಿನ್ನರ್ ಅಜಾಝ್ ಪಟೇಲ್, ಎರಡನೇ ಇನಿಂಗ್ಸ್ ನಲ್ಲೂ ತಮ್ಮ ಕೈಚಳಕ ಮುಂದುವರಿಸಿ, ಮತ್ತೆ ಆರು ವಿಕೆಟ್ ಕಿತ್ತರು. ಆ ಮೂಲಕ ವಾಂಖೆಡೆ ಕ್ರೀಡಾಂಗಣದಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ದಾಖಲೆ ಬರೆದರು.
ಇದಕ್ಕೂ ಮುನ್ನ, ವಾಂಖೆಡೆ ಕ್ರೀಡಾಂಗಣದಲ್ಲಿ ಇಯಾನ್ ಬಾಥಮ್ ಒಟ್ಟು 22 ವಿಕೆಟ್ ಗಳನ್ನು ಕಿತ್ತಿದ್ದರು. ಆ ದಾಖಲೆಯನ್ನು ಅಳಿಸಿ ಹಾಕಿದ ಅಜಾಝ್ ಪಟೇಲ್, ಒಟ್ಟು 25 ವಿಕೆಟ್ ಗಳನ್ನು ಕಿತ್ತು ಹೊಸ ದಾಖಲೆ ನಿರ್ಮಿಸಿದರು.